ಇಸ್ರೋಗೆ ಬರುವಾಗ, ಹೋಗುವಾಗ ಸಂಚಾರಿ ನಿಯಮ ಪಾಲಿಸಿದ ಮೋದಿ

Public TV
2 Min Read

ಬೆಂಗಳೂರು: ಸಂಚಾರಿ ನಿಯಮಗಳೆಂದರೆ ರಾಜ್ಯದ ನಾಯಕರಿಗೆ ಕಸದ ರೀತಿಯಂತಾಗಿವೆ. ಗತ್ತಿನಲ್ಲೇ ಓಡಾಡುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಸಂಚಾರಿ ನಿಯಮವನ್ನು ಚಾಚೂತಪ್ಪದೇ ಪಾಲಿಸುತ್ತಾರೆ. ಸೀಟ್ ಬೆಲ್ಟ್ ಧರಿಸುವುದನ್ನು ಯಾವುದೇ ಕಾರಣಕ್ಕೂ ಮರೆಯುವದಿಲ್ಲ.

ರಾಜ್ಯದ ಜನಪ್ರತಿನಿಧಿಗಳು ಎಷ್ಟರ ಮಟ್ಟಿಗೆ ಸಂಚಾರಿ ನಿಯಮ ಪಾಲಿಸುತ್ತಾರೆ. ಎಷ್ಟು ಜನ ಸೀಟ್ ಬೆಲ್ಟ್ ಧರಿಸಿ ಪ್ರಯಾಣಿಸುತ್ತಾರೆ ಎಂಬುದರ ಕುರಿತು ನಿನ್ನೆಯಷ್ಟೇ ಪಬ್ಲಿಕ್ ಟಿವಿ ವರದಿ ಪ್ರಸಾರಸಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯನವರಾದಿಯಾಗಿ ಬಹುತೇಕ ನಾಯಕರು ಸೀಟ್ ಬೆಲ್ಟ್ ಧರಿಸುವ ಶಿಸ್ತನ್ನು ತೋರಿಸಿರಲಿಲ್ಲ.

ಚಂದ್ರಯಾನ ನೇರ ಪ್ರಸಾರ ವೀಕ್ಷಿಸಲು ನಗರದ ಇಸ್ರೋ ಕೇಂದ್ರಕ್ಕೆ ಆಗಮಿಸಿದಾಗಲೂ ಮತ್ತು ಇಸ್ರೋ ಕೇಂದ್ರದಿಂದ ಯಲಹಂಕ ವಾಯುನೆಲೆಗೆ ತೆರಳಿದಾಗ ಕಾರಿನಲ್ಲಿ ಕುಳಿತ ತಕ್ಷಣವೇ ಮೋದಿ ಸೀಟ್ ಬೆಲ್ಟ್ ಧರಿಸಿದ್ದಾರೆ. ಕಾರಿನಲ್ಲಿ ಕುಳಿತ ತಕ್ಷಣ ಮೋದಿ ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಎಸ್‍ಪಿಜಿ ಸಿಬ್ಬಂದಿ ಸಹಾಯ ಮಾಡುತ್ತಾರೆ.

ರಾಜ್ಯದ ನಾಯಕರು ಸಂಚಾರಿ ನಿಯಮ ಪಾಲಿಸುವಲ್ಲಿ ದೂರ ಉಳಿದಿದ್ದಾರೆ. ರಾಜಕೀಯ ನಾಯಕರಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಧರಿಸದೇ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಾರೆ. ನಿತ್ಯ ಜನಪ್ರತಿನಿಧಿಗಳಿಗೆ ಸೆಲ್ಯೂಟ್ ಮಾಡಿ ಕಳುಹಿಸುವ ಪೊಲೀಸರೂ ಸಹ ಈ ಕುರಿತು ನಾಯಕರಿಗೆ ಮನವರಿಕೆ ಮಾಡುತ್ತಿಲ್ಲ.

ಸೆಪ್ಟೆಂಬರ್ 4ರಂದು ಸೆರೆ ಹಿಡಿದಿದ್ದ ದೃಶ್ಯದಲ್ಲಿಯೂ ಸಹ ಬಿಎಸ್‍ವೈ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಮೊನ್ನೆಯ ದೃಶ್ಯದಲ್ಲಿಯೂ ಸಹ ಯಡಿಯೂರಪ್ಪ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರ್ಯನಿಮಿತ್ತ ತಮ್ಮ ನಿವಾಸ ಧವಳಗಿರಿಯಿಂದ ಕಾರಲ್ಲಿ ಹೊರಟಾಗ ಯಥಾ ಪ್ರಕಾರ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣಿಸಿದರೂ ಪೊಲೀಸರು ಈ ಬಗ್ಗೆ ಗಮನವೇ ಹರಿಸಲಿಲ್ಲ.

ಸೀಟ್ ಬೆಲ್ಟ್ ಧರಿಸದೇ ಇದ್ದರೆ ಕಾರು ಪ್ರಯಾಣಿಕರಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಸಂಚಾರ ನಿಯಮ ಉಲ್ಲಂಘಿಸಿದ್ದರೂ ಪೊಲೀಸರು ಮೂಖ ಪ್ರೇಕ್ಷಕರಾಗಿದ್ದಾರೆ. ಸೆ.3 ರಂದು ಜೆಪಿ ನಗರದ ನಿವಾಸದಿಂದ ಕಾರಲ್ಲಿ ಹೊರಟ ಕುಮಾರಸ್ವಾಮಿ ಸೀಟ್ ಬೆಲ್ಟ್ ಧರಿಸುವ ಗೋಜಿಗೆ ಹೋಗಲಿಲ್ಲ. ಭದ್ರತೆಗೆ ಇದ್ದ ಪೊಲೀಸರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂದು ಹೇಳಲು ಹೋಗಲಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಸಂಚಾರಿ ನಿಯಮ ಅನ್ವಯವಾಗುವುದಿಲ್ಲ. ಟ್ರಾಫಿಕ್ ರೂಲ್ಸ್ ಲೆಕ್ಕಕ್ಕೆ ಇದ್ದಂಗೆ ಇಲ್ಲ. ಅವ್ರು ಕೂಡ ಕಾರಲ್ಲಿ ಕೂತ್ರೆ ಸೀಟ್ ಬೆಲ್ಟ್ ಹಾಕಿಕೊಳ್ಳುವುದೇ ಇಲ್ಲ.

ಅನರ್ಹ ಶಾಸಕ ಬಿಸಿ ಪಾಟೀಲ್ ಈ ಹಿಂದೆ ಇನ್ಸ್‍ಪೆಕ್ಟರ್ ಆಗಿದ್ದವರು. ಎಲ್ಲರಿಗೂ ರೂಲ್ಸ್ ರೆಗ್ಯೂಲೇಷನ್ ಹೆಳಿಕೊಟ್ಟವರು. ಎಲ್ಲರಿಗಿಂತ ರೂಲ್ಸ್ ಬಗ್ಗೆ ಸ್ವಲ್ಪ ಜಾಸ್ತಿಯೇ ಅವರಿಗೆ ತಿಳಿದಿರುತ್ತದೆ. ಆದರೆ ಅವರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳದೇ ನಿಯಮ ಉಲ್ಲಂಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *