ಹೆಂಡತಿಯ ಕಾಮದಾಟಕ್ಕೆ ಅರ್ಚಕ ಬಲಿ – ಪತ್ನಿಯ ಪ್ಲ್ಯಾನ್‌ನಂತೆ ಪ್ರಿಯಕರನಿಂದ ಕೊಲೆ, ಲವ್ವರ್ಸ್‌ ಅರೆಸ್ಟ್

1 Min Read

ಮಂಡ್ಯ: ಅರ್ಚಕ ಅನುಮಾನಾಸ್ಪದವಾಗಿ ಸಾವನ್ನಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಕಾಮದಾಟಕ್ಕೆ ಅಡ್ಡಿಯಾಗಬಾರದೆಂದು ಪ್ರಿಯಕರನಿಂದಲೇ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಮಂಡ್ಯದ (Mandya) ಮರಳಗಾಲ ಬಳಿ ನಡೆದಿದೆ.

ಮೃತ ಪತಿಯನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಅರ್ಚಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಪತ್ನಿ ಶಾಲಿನಿ ಹಾಗೂ ಪ್ರಿಯಕರನನ್ನು ಹರೀಶ್ ಎನ್ನಲಾಗಿದೆ. ಸಿದ್ದಲಿಂಗಪ್ಪ ಹಾಗೂ ಶಾಲಿನಿಗೆ ಎರಡು ಮಕ್ಕಳಿದ್ದವು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇರಾನ್‌ನಿಂದ ಖಡಕ್‌ ಪ್ರತಿಕ್ರಿಯೆ – ತೈಲ ಟ್ಯಾಂಕರ್‌ ಕುರಿತ ಅಮೆರಿಕದ ಪೋಸ್ಟ್‌ ಡಿಲೀಟ್‌

ಮಾ.6ರಂದು ಈ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲಿನಿ ಹಾಗೂ ಅದೇ ಗ್ರಾಮದ ಹರೀಶ್ ಅಕ್ರಮ ಸಂಬಂಧ ಹೊಂದಿದ್ದರು. ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪನ ಕೈಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇದರಿಂದ ಶಾಲಿನಿಗೆ ಹಲವು ಬಾರಿ ಬುದ್ಧಿವಾದ ಹೇಳಿ, ಸರಿದಾರಿಗೆ ತರಲು ಯತ್ನಿಸಿದ್ದ.

ಇದರ ನಡುವೆ ತನ್ನ ಗಂಡನನ್ನೇ ಮುಗಿಸಲು ಶಾಲಿನಿ ಸ್ಕೆಚ್ ಹಾಕಿದ್ದಳು. ಪೂಜೆಗೆಂದು ಪತಿ ಮರಳಗಾಲಕ್ಕೆ ತೆರಳಿದ್ದರು. ಈ ವೇಳೆ ಶಾಲಿನಿ ತನ್ನ ಪ್ರಿಯಕರನಿಗೆ ಮೆಸೇಜ್ ಮಾಡಿ ತಿಳಿಸಿದ್ದಳು. ಆಗ ನಾಲೆ ಏರಿ ಬೈಕ್‌ನಲ್ಲಿ ಬರ್ತಿದ್ದ ಸಿದ್ದಲಿಂಗಪ್ಪನನ್ನು ಪ್ರಿಯಕರ ಹರೀಶ್ ಮತ್ತು ಇಬ್ಬರು ಸ್ನೇಹಿತರು ಅಡ್ಡಗಟ್ಟಿದ್ದರು. ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿ, ಹತ್ಯೆಗೈದು ಬಳಿಕ ನಾಲೆಗೆ ಮೃತದೇಹವನ್ನು ಬೀಸಾಡಿ ಅಪಘಾತದಂತೆ ಬಿಂಬಿಸಿದ್ದರು.

ಸಿದ್ದಲಿಂಗಪ್ಪ ಮನೆಗೆ ವಾಪಸ್ ಬಾರದ್ದಕ್ಕೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಸಿಡಿಎಸ್ ನಾಲೆ ದಡದಲ್ಲಿ ಚಪ್ಪಲಿ ಹಾಗೂ ಬಟ್ಟೆ ಪತ್ತೆಯಾಗಿತ್ತು. ಬಳಿಕ ನಾಲೆಯಲ್ಲಿ ಮೃತದೇಹ ಹಾಗೂ ಬೈಕ್ ಸಿಕ್ಕಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ, ಚಪ್ಪಲಿ ಸಿಕ್ಕ ಸ್ಥಳದಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು. ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಸಾವಿನ ರಹಸ್ಯ ಬಯಲಾಗಿದೆ.ಇದನ್ನೂ ಓದಿ: ರಸ್ತೆ ದಾಟುವಾಗ ಕಾರು ಡಿಕ್ಕಿ – 14 ಅಡಿ ಎತ್ತರದಿಂದ ಹಾರಿ ಬಿದ್ದ ವಿದೇಶಿ ಯುವತಿ, ಸ್ಥಳದಲ್ಲೇ ಸಾವು

Share This Article