ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ಚಾಲೆಂಜ್ ಎಸೆದು ಗೆದ್ದ ಅಮಿತ್ ಶಾ

Public TV
2 Min Read

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಚಾಲೆಂಜ್ ಹಾಕಿ ಗೆದ್ದಿದ್ದಾರೆ.

ಹೌದು. ಮೋದಿ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಬಿಜೆಪಿ ಬೀಟ್ ಕವರ್ ಮಾಡುವ ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರಿಗೆ ಭೋಜನ ಕೂಟವನ್ನು ಪಕ್ಷ ಆಯೋಜಿಸಿತ್ತು. ಪತ್ರಕರ್ತರ ಜೊತೆ ಮಾತನಾಡುವ ಸಂದರ್ಭದಲ್ಲಿ ಅಮಿತ್ ಶಾ, “ನೀವು ಎಷ್ಟೇ ಸುದ್ದಿಯನ್ನು ಪ್ರಕಟಿಸಿದರೂ ನಾನು ಪ್ರಕಟ ಮಾಡುವವರೆಗೂ ರಾಷ್ಟ್ರಪತಿ ಅಭ್ಯರ್ಥಿ ಯಾರು ಎನ್ನುವುದು ನಿಮಗೆ ಗೊತ್ತೆ ಆಗುವುದಿಲ್ಲ” ಎಂದು ತಿಳಿಸಿದ್ದರು.

ಹಲವು ವರ್ಷಗಳ ರಾಜಕೀಯ ವರದಿಗಾರಿಕೆಯ ಅನುಭವ ಮತ್ತು ಬಿಜೆಪಿ ಹಿರಿಯ ನಾಯಕರ ಪರಿಚಯ ಹೊಂದಿದ್ದ ಪತ್ರಕರ್ತರು ಅಮಿತ್ ಶಾ ಎಸೆದ ಈ ಸವಾಲನ್ನು ಗಂಭೀರವಾಗಿ ಸ್ವೀಕರಿಸಿದ್ದರು. ಈ ಕಾರಣಕ್ಕಾಗಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿ, ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು, ಮೆಟ್ರೋ ಮ್ಯಾನ್ ಇ ಶ್ರೀಧರನ್ ಹೆಸರು ಹಲವು ಮಧ್ಯಮಗಳಲ್ಲಿ ತೇಲಿಬಂದಿತ್ತು. ಆದರೆ ಯಾವೊಂದು ಮಾಧ್ಯಮದಲ್ಲಿ ರಾಮನಾಥ್ ಕೋವಿಂದ್ ಅವರೇ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಬಂದಿರಲೇ ಇಲ್ಲ.

ಅಮಿತ್ ಶಾ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಕೋವಿಂದ್ ಅಭ್ಯರ್ಥಿ ಎಂದು ಪ್ರಕಟಿಸುವ ಸಂದರ್ಭದಲ್ಲಿ, ರಾಮನಾಥ್ ಅವರು ಬಿಹಾರ ರಾಜ್ಯಪಾಲರು ಎನ್ನುವ ಮಾಹಿತಿ ಬಿಟ್ಟರೆ ಹೆಚ್ಚಿನ ಮಾಹಿತಿ ಪತ್ರಕರ್ತರ ಬಳಿ ಇರಲಿಲ್ಲ ಎನ್ನುವ ವಿಚಾರವನ್ನು ಮಾಧ್ಯಮವೊಂದು ಪ್ರಕಟಿಸಿದೆ.

ರಾಜಕೀಯ ನಾಯಕರು ಎಷ್ಟೇ ಗಂಭೀರವಾದ ವಿಷಯವನ್ನು ಚರ್ಚೆ ಮಾಡಿದರೂ ಮೂಲಗಳಿಂದಾಗಿ ಆ ಮಾಹಿತಿ ಮಾಧ್ಯಮಗಳ ತಲುಪುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ರಾಷ್ಟ್ರಪತಿ ಅಭ್ಯರ್ಥಿ ವಿಚಾರದಲ್ಲಿ ಮಾಧ್ಯಮಗಳಿಗೆ ಒಂದು ಚೂರು ಸುಳಿವು ಸಿಗದಂತೆ ನೋಡಿಕೊಳ್ಳುವಲ್ಲಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ.

ಶಾ, ಮೋದಿ ಜೋಡಿ ಈ ರೀತಿ ಸಸ್ಪೆನ್ಸ್ ಅಚ್ಚರಿಯ ಆಟ ಆಡುವುದು ಇದೇ ಮೊದಲೆನಲ್ಲ. ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನಾವೀಸ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇಮಕ ಮತ್ತು ಕೇಂದ್ರ ಸರ್ಕಾರದ ಮಹತ್ವದ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸುವ ಸಂದರ್ಭದಲ್ಲಿ ಈ ಜೋಡಿ ಅಚ್ಚರಿ ನೀಡಿತ್ತು.

ವಿಶೇಷವಾಗಿ ನೋಟ್ ಬ್ಯಾನ್ ನಿಷೇಧದ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲೂ ಪ್ರಧಾನಿ ಮೋದಿ ಮತ್ತು ಟೀಂ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ :ರಾಮನಾಥ್ ಕೋವಿಂದ್‍ಗೆ ಇದೆ ಕಲಬುರಗಿಯ ನಂಟು: ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಮೋದಿ ಹೊಡೆದಿದ್ದು ಹೇಗೆ..?

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

 

Share This Article
Leave a Comment

Leave a Reply

Your email address will not be published. Required fields are marked *