ಬೆಳಗಾವಿಯನ್ನು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್

Public TV
2 Min Read

ಬೆಳಗಾವಿ: 1892ರಲ್ಲಿ ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಭೇಟಿ ನೀಡಿದ್ದರು. ಅವರ ಪ್ರಭಾವ ಈ ನೆಲದಲ್ಲಿ ಇಂದಿಗೂ ಇದೆ. ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಪ್ರಾರಂಭಿಸಿದ್ದ ಗಣೇಶ ಹಬ್ಬದ ಸಂಸ್ಕೃತಿ ಹಾಗೂ ಪಾವಿತ್ರತೆಯನ್ನ ಜಿಲ್ಲೆಯ ಜನತೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹೇಳಿದ್ದಾರೆ.

ನಗರದಲ್ಲಿ ನಡೆದ ಕರ್ನಾಟಕ ಲಾ ಸೂಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿಗೆ ಇದು ನನ್ನ ಮೊದಲ ಭೇಟಿ. ಜಿಲ್ಲೆಯು ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಸಾಕಷ್ಟು ಹೆಸರು ಮಾಡಿದ್ದು, ದೇಶದಲ್ಲಿ ತನ್ನದೇ ಛಾಪು ಮೂಡಿಸಿದೆ. ಬೆಳಗಾವಿಯು ಲೋಹ ಹಾಗೂ ಲಸಿಕೆ ತಯಾರಿಕೆಯಲ್ಲಿ ಇತಿಹಾಸ ಬರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಕೀಲಿಕೆ ಕೇವಲ ವೃತ್ತಿಯಾಗದೇ ಪ್ಯಾಷನ್ ಆಗಬೇಕು. ಈ ನಿಟ್ಟಿನಲ್ಲಿ ರಾಜಾ ಲಖಮಗೌಡ ಕಾಲೇಜ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ರಾಜಾ ಲಖಮಗೌಡ ಅವರ ತ್ಯಾಗವು ಇಂದು ದೊಡ್ಡ ಕಾನೂನು ಸೊಸೈಟಿಯಾಗಿ ಬೆಳೆಯುವಂತೆ ಮಾಡಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಹಾತ್ಮಾ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್ ವಕೀಲರಾಗಿ ಸೇವೆ ಸಲ್ಲಿಸಿದ್ದರು ಎಂದರು.

ದೇಶದಲ್ಲಿ ಯುವ ಕ್ರಾಂತಿ ಆಗುತ್ತಿದ್ದು, ಅದರ ಲಾಭ ದೇಶಕ್ಕೆ ಸದ್ಯಕ್ಕೆ ಆಗದಿದ್ದರೂ ಮುಂದಿನ ದಿನದಲ್ಲಿ ಫಲ ಸಿಗಲಿದೆ. ದೇಶದ ಜನತೆ ಸರಿಯಾದ ದಾರಿಯಲ್ಲಿ ನಡೆಯಬೇಕಾದರೆ ನ್ಯಾಯಮೂರ್ತಿಗಳ ಪಾತ್ರ ಮಹತ್ವದ್ದಾಗಿದೆ. ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿವೃತ್ತಿ ಹೊಂದಲಿದ್ದಾರೆ ಎಂದ ಅವರು, ದೀಪಕ್ ಮಿಶ್ರಾ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನನಗೂ ಮತ್ತು ಬೆಳಗಾವಿಗೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಗೆ ಸುವರ್ಣ ಸೌಧ ಕೊಟ್ಟಿರುವುದು ನಮ್ಮ ಸರ್ಕಾರ. ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಯ ಗ್ರಾಮದಿಂದ ನಾನು ಗ್ರಾಮ ವಾಸ್ತವ್ಯವನ್ನು ಆರಂಭ ಮಾಡಿದ್ದೆ ಎಂದು ತಿಳಿಸಿದರು. ಬೆಳಗಾವಿಯು ದೇಶ ಮತ್ತು ರಾಜ್ಯಕ್ಕೆ ಮಹಾನ್ ವ್ಯಕ್ತಿಗಳನ್ನು ಕೊಡುಗೆ ನೀಡಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಈ ನಾಡಿನ ಮಹಾನ್ ವ್ಯಕ್ತಿಗಳು ಎಂದರು.

ಹಳೇ ತಲೆಮಾರಿನವರು ಯುವಕರನ್ನು ಕಡೆಗಣನೆ ಮಾಡಬಾರದು. ಪ್ರತಿದಿನ 10 ಯುವಕರ ಜತೆ ಮಾತನಾಡಿದರೆ ಬೌದ್ಧಿಕ ಹಾಗೂ ಶಾರೀರಿಕವಾಗಿ ಬಲಗೊಳ್ಳುತ್ತೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *