ಬೆಂಗಳೂರಿನ ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ದೇವಾಲಯ ಉದ್ಘಾಟಿಸಿದ ರಾಷ್ಟ್ರಪತಿಗಳು  

Public TV
3 Min Read

ಬೆಂಗಳೂರು: ನಗರದ ವಸಂತಪುರದಲ್ಲಿ ನಿರ್ಮಿಸಲಾದ ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಬೆಳಗ್ಗೆ 11 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪತ್ನಿ ಸವಿತಾ ಕೋವಿಂದ್‍ಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ರಾಷ್ಟ್ರಪತಿಗಳು ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದರ ಪ್ರತಿಮೆಗೆ ನಮಿಸಿ ಆನಂತರ ತಿರುಪತಿ ಮಾದರಿಯಲ್ಲಿ ನಿರ್ಮಿಸಲಾಗಿರುವ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ಏನಿದು ಅನ್ಯಾಯ? ಏನು ಕ್ರೈಂ ಮಾಡಿದ್ದಾರೆ? ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ: ಡಿಕೆಶಿ ಕೆಂಡಾಮಂಡಲ

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ‘ಭಕ್ತಿಭಾವದ ಪ್ರತೀಕವೇ ಈ ದೇವಾಲಯ. ಇದು ಒಂದು ಸುಂದರ ದೇವಾಲಯ. ದೇವಾಲಯಗಳು ಹಿಂದೂ ಧರ್ಮದ ಚಿಹ್ನೆಗಳು. ಅದ್ವೈತ್ವ, ವಿಶಿಷ್ಟಾದೈತ್ವ, ಜ್ಞಾನ, ಕರ್ಮ, ಭಕ್ತಿ ಮಾರ್ಗಗಳಿಂದ ಬಂದಿವೆ. ಭಗವದ್ಗೀತಾ ಅನೇಕ ಪಾಠಗಳನ್ನು ಅನೇಕ ಬಗೆಯ ಜನರಿಗೆ ನೀಡುತ್ತದೆ. ಭಗವದ್ಗೀತೆಯನ್ನು ಸ್ಮರಿಸುವಾಗ ಪ್ರಭುಪಾದರನ್ನು ನೆನೆಸುತ್ತೇವೆ. ದೇವಸ್ಥಾನಗಳು ಒಂದು ಶಾಂತಿಯುತವಾದ ಸ್ಥಳಗಳು. ಈ ವರ್ಷ ಶ್ರೀಪ್ರಭುಪಾದರು 125ನೇ ವರ್ಷ ಪೂರೈಸುತ್ತಿದ್ದಾರೆ. ನಾನು ಈ ದೇವಾಲಯದ ಕಲೆಯನ್ನು ಗಮನಿಸಿದೆ, ಇದು ನಿಜಕ್ಕೂ ಸುಂದರವಾದ ಕಲೆಯಾಗಿದೆ, ನನಗೆ ಇಷ್ಟವಾಯಿತು ಎಂದು ಹೊಗಳಿದರು.

ರಾಷ್ಟ್ರಪತಿಗಳ ಬಳಿಕ ಸಿಎಂ ಬಸವರಾಜು ಬೊಮ್ಮಾಯಿ ಮಾತನಾಡಿ, ಇಂದು ಬೆಂಗಳೂರು ನಗರ ಮಾತ್ರ ಅಲ್ಲ. ವಿಶ್ವಕ್ಕೆ ಭಕ್ತಿಯ ಚೈತನ್ಯದ ದಿನ. ಪ್ರಭು ರಾಜಾಧಿರಾಜ ಗೋವಿಂದರ ಆಗಮನ ಇಲ್ಲಿ ಆಗಿದೆ. ಮಧುಪಂಡಿತ್ ದಾಸ್ ಅವರು ಎರಡು ದಶಕಗಳ ಕಾಲ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ದೇವರ ಮೂರ್ತಿ ಪ್ರತಿಷ್ಠಾಪಿಸಿ ಲೋಕ ಕಲ್ಯಾಣ ಸಂಕಲ್ಪ ಮಾಡಿದ್ದಾರೆ. ರಾಷ್ಟ್ರಪತಿಗಳು ಈ ದೇವಸ್ಥಾನ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ನಮ್ಮ ದೇಶ ಎಂಥ ದೈವೀ ಸಂಸ್ಕೃತಿ ಹೊಂದಿದೆ ಎಂಬುದನ್ನು ತೋರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:  ರಾಯಚೂರಿಗೆ ಕೊನೆಗೂ ಭೇಟಿ ನೀಡಿದ ಉಸ್ತುವಾರಿ ಸಚಿವ: ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ

ಇದೇ ವೇಳೆ ನಾಗರೀಕತೆ ಹಾಗೂ ಸಂಸ್ಕೃತಿ ಬಗ್ಗೆಯೂ ಮಾತನಾಡಿದ ಬೊಮ್ಮಾಯಿ ಅವರು, ಹಲವರಿಗೆ ಇವೆರಡರ ವ್ಯತ್ಯಾಸ ಗೊತ್ತಿಲ್ಲ. ನಾಗರೀಕತೆ ಅಂದರೆ ನಾವು ಏನು ಎಂದು ಅರ್ಥ, ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುವುದಾಗಿದೆ. ಸಾಕಷ್ಟು ಜನರಿಗೆ ಸಂಸ್ಕೃತಿ ಹಾಗೂ ಆಧ್ಯಾತ್ಮದ ಜ್ಞಾನ ಕಡಿಮೆ. ಭಾರತದ ದೇಶದಲ್ಲೇ ಅತಿ ಹೆಚ್ಚು ಭಕ್ತಿ ಚಳವಳಿಗಳು ನಡೆದಿವೆ. ಇಸ್ಕಾನ್ ದೇಶದ ಅನೇಕ ಕಡೆ ದೇವಸ್ಥಾನಗಳನ್ನು ನಿರ್ಮಿಸಿದೆ. ಆಧ್ಯಾತ್ಮದ ಚಿಂತನೆಗಳನ್ನು ಸಾರುವಲ್ಲಿ ಇಸ್ಕಾನ್ ಪಾತ್ರ ದೊಡ್ಡದಿದೆ. ಅಕ್ಷಯ ಪಾತ್ರೆ ಯೋಜನೆ ರಾಜ್ಯದಲ್ಲಿ ನಡೆಯುತ್ತಿದೆ. ನಮ್ಮ ಸರ್ಕಾರದ ಪೂರ್ಣ ಸಹಕಾರವನ್ನ ಈ ಯೋಜನೆ ನೀಡುತ್ತದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕನ್ನಡದಲ್ಲಿ ಭಾಷಣ ಆರಂಭಿಸಿದ್ದು ವೀಶೇಷವಾಗಿತ್ತು. ಗೆಹ್ಲೋಟ್ ಧನ್ಯವಾದ, ತಮ್ಮೆಲ್ಲರಿಗೂ ಆಧಾರದ ಸ್ವಾಗತ ಎಂದು ಭಾಷಣ ಆರಂಭಿಸಿದ ರಾಜ್ಯಪಾಲರು, ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ದರ್ಶನಕ್ಕೆ ಸೌಭಾಗ್ಯ ಕಲ್ಪಿಸಲಾಗಿತ್ತು. ನಾನು ಕೂಡ ಇಸ್ಕಾನ್‍ಗೆ ಭೇಟಿ ನೀಡಿ ಮೂಕವಿಸ್ಮಿತನಾದೆ. ದೇಶ ವಿದೇಶಗಳಿಂದ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಯಾವುದೇ ಜಾತಿ, ಭೇದ ಇಲ್ಲದೆ ಸರ್ವರಿಗೂ ದೇವಾಲಯಕ್ಕೆ ಪ್ರವೇಶವಿದೆ. ಶ್ರೀಲಾ ಪ್ರಭುಪಾದರು ಹಲವೆಡೆ ದೇವಾಲಯಗಳನ್ನು ಸ್ಥಾಪಿಸಿದ್ದಾರೆ. ರಾಜಾದಿರಾಜ ಗೋವಿಂದ ದೇವಾಲಯ ಭಕ್ತಿ ಭಾವ ನೀಡಿ ಸಕಾರಾತ್ಮಕ ಚಿಂತನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಲಿಸಿರುವ ವಿಶ್ವಾಸ ನನಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *