ಹೆಮ್ಮೆಯಿಂದ ಬದುಕಿದ್ದು, ಅವಮಾನದಿಂದ ಬದುಕಲು ಸಾಧ್ಯವಾಗ್ತಿಲ್ಲ: ಗಿರಿ ಡೆತ್‍ನೋಟ್

Public TV
1 Min Read

ಅಲಹಾಬಾದ್: ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಗಿರಿಯವರು ನನ್ನ ದಾರಿ ತಾನು ನೋಡಿಕೊಂಡಿರುವ ಹಿಂದಿನ ಕಾರಣಗಳನ್ನು ತಿಳಿಸಿದ್ದಾರೆ.

ಪತ್ರದಲ್ಲಿ ಇದುವರೆಗೆ ಹೆಮ್ಮೆಯಿಂದ ಬದುಕಿದ್ದೇನೆ ಮತ್ತು ಹೆಮ್ಮೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಅವರು ಬರೆದಿದ್ದಾರೆ. ಆತ್ಮಹತ್ಯೆ ನೋಟ್ 7-8 ಪುಟಗಳಷ್ಟು ಉದ್ದವಾಗಿದ್ದು, ತಮಗೆ ತೊಂದರೆ ಕೊಟ್ಟಿರುವ ಹಲವರ ಹೆಸರುಗಳನ್ನು ಕೂಡ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಹಲವಾರು ವಿಚಾರಗಳಲ್ಲಿ ಅಸಮಾಧಾನಗೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಗಿರಿ ತಮ್ಮ ಡೆತ್ ನೋಟ್ ನಲ್ಲಿ ವಿವರಿಸಿದ್ದಾರೆ. ಸದ್ಯ ಡೆತ್ ನೋಟ್ ಅನ್ನು ಐಜಿ ಕೆಪಿ ಸಿಂಗ್ ವಶಕ್ಕೆ ಪಡೆದುಕೊಂಡಿದ್ದಾರೆ.

ನರೇಂದ್ರ ಗಿರಿ ತಮ್ಮ ಆತ್ಮಹತ್ಯೆ ಪತ್ರದಲ್ಲಿ ವಿಲ್ ಕೂಡ ಬರೆದಿದ್ದು, ಆಶ್ರಮದ ಬಗ್ಗೆ ಏನು ಮಾಡಬೇಕೆಂದು ಉಲ್ಲೇಖಿಸಿದ್ದಾರೆ. ಯಾರು ಆಶ್ರಮವನ್ನು ನೋಡಿಕೊಳ್ಳುತ್ತಾರೆ ಎಂದು ವಿಲ್‍ನಲ್ಲಿ ಬರೆಯಲಾಗಿದೆ ಎಂದು ಪ್ರಯಾಗರಾಜ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ಪ್ರಯಾಗರಾಜ್ ಸಂತ ನರೇಂದ್ರಗಿರಿ ಪತ್ತೆ

ಈ ಬಗ್ಗೆ ನರೇಂದ್ರ ಮಹಾರಾಜ್ ಗಿರಿ ಶಿಷ್ಯ ಆನಂದ್ ಗಿರಿ ಮಾತನಾಡಿದ್ದು, ಮಹಾಂತ್ ನರೇಂದ್ರ ಗಿರಿ ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಹಣದ ಕಾರಣದಿಂದ ಅವರನ್ನು ಹಿಂಸಿಸಲಾಗಿದೆ. ಇದು ನನ್ನ ವಿರುದ್ಧದ ದೊಡ್ಡ ಪಿತೂರಿ. ಪಕ್ಷಪಾತವಿಲ್ಲದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಪೊಲೀಸ್ ಅಧಿಕಾರಿಗಳು, ಭೂ ಮಾಫಿಯಾ ಈ ಪಿತೂರಿಯಲ್ಲಿ ಭಾಗಿಯಾಗಿದೆ. ತನಿಖೆಯಲ್ಲಿ ನಾನು ಪೊಲೀಸರಿಗೆ ಸಹಕರಿಸುತ್ತೇನೆ. ಗುರೂಜಿ ನನ್ನ ವಿರುದ್ಧ ಕೆರಳಿದ್ದರು. ನಾನು ತಪ್ಪಿತಸ್ಥನಾಗಿದ್ದರೆ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧ. ನಾನು 15 ದಿನಗಳ ಹಿಂದೆ ಗುರೂಜಿಯೊಂದಿಗೆ ಮಾತನಾಡಿದ್ದೆ ಎಂದು ಆನಂದ್ ಗಿರಿ ಹೇಳಿದ್ದಾರೆ. ಸದ್ಯ ಆನಂದ್ ಗಿರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *