ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

Public TV
1 Min Read

ನವದೆಹಲಿ: ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

ಅನಾರೋಗ್ಯದ ಕಾರಣ ನೀಡಿ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದು, ಅವರ ಅನುಮೋದನೆಯ ನಂತರ ಗೃಹ ಸಚಿವಾಲಯವು ಜಗದೀಪ್ ಧನಕರ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದೆ.ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

ಇಂದು ಅಧಿವೇಶನದಲ್ಲಿ ಜಗದೀಪ್ ಧನಕರ್ ಅವರು ರಾಜ್ಯಸಭಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿಲ್ಲ. ಹೀಗಾಗಿ ಉಪರಾಷ್ಟ್ರಪತಿಗಳ ಅಧಿಕಾರಾವಧಿಯ ಬಗ್ಗೆ ತಿಳಿಸುವ ಸಂವಿಧಾನದ 67ನೇ ವಿಧಿಯ ಅಡಿಯಲ್ಲಿ, ಹೊಸ ಉಪಾಧ್ಯಕ್ಷರ ಆಯ್ಕೆಯಾಗುವವರೆಗೂ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಾರ್ಯನಿರ್ವಹಿಸುತ್ತಾರೆ.

ರಾಜ್ಯಸಭಾ ಅಧ್ಯಕ್ಷರಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದ ಅಧ್ಯಕ್ಷತೆ ವಹಿಸಿದ ನಂತರ ಸೋಮವಾರ (ಜು.21) ರಾಜೀನಾಮೆ ಘೋಷಿಸಿದ್ದರು. ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದ ಪತ್ರದಲ್ಲಿ, ಆರೋಗ್ಯ ದೃಷ್ಟಿಯಿಂದ ಹಾಗೂ ವೈದ್ಯಕೀಯ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ರಾಜೀನಾಮೆ ಘೋಷಿಸಿರುವುದಾಗಿ ಉಲ್ಲೇಖಿಸಿದ್ದರು.

ಕೆಲ ದಿನಗಳ ಹಿಂದೆ ಉತ್ತರಾಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೂರ್ಛೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ಕೂಡ ತಮ್ಮ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ.ಇದನ್ನೂ ಓದಿ: ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

Share This Article