ನವದೆಹಲಿ: ಮುಂಬೈ ಸ್ಫೋಟ (Mumbai Blast) ಪ್ರಕರಣ ಮತ್ತು ಉಗ್ರ ಕಸಬ್ (Kasab) ಗಲ್ಲಿಗೇರಲು ಕಾರಣರಾಗಿದ್ದ ಸರ್ಕಾರಿ ಅಭಿಯೋಜಕ, ಖ್ಯಾತ ವಕೀಲ ಉಜ್ವಲ್ ನಿಕಮ್ (Ujjwal Nikam), ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಸಮಾಜ ಸೇವಕ ಸಿ ಸದಾನಂದನ್ ಮಾಸ್ಟರ್ ಮತ್ತು ಇತಿಹಾಸಕಾರ ಮೀನಾಕ್ಷಿ ಜೈನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.
ರಾಷ್ಟ್ರಪತಿಗಳು ರಾಜ್ಯಸಭೆಗೆ ಗರಿಷ್ಠ 12 ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ನಾಮನಿರ್ದೇಶಿತರು ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಿಂದ ಬಂದಿರಬೇಕು. ಮೇಲ್ಮನೆಯಲ್ಲಿ ಖಾಲಿ ಇದ್ದ ನಾಲ್ಕು ಸ್ಥಾನಗಳಿಗೆ ಈ ನಾಲ್ವರು ಆಯ್ಕೆ ಆಗಿದ್ದಾರೆ.
ಉಜ್ವಲ್ ನಿಕಂ
72 ವರ್ಷದ ಉಜ್ವಲ್ ನಿಕಮ್ 1993ರ ಮುಂಬೈ ಸ್ಫೋಟಗಳು ಮತ್ತು 26/11 ದಾಳಿಗಳಂತಹ ಪ್ರಮುಖ ಭಯೋತ್ಪಾದನಾ ಪ್ರಕರಣಗಳಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಕೆಲಸ ಮಾಡಿದ್ದಾರೆ. ಅವರು ಸಂಗೀತ ದಿಗ್ಗಜ ಗುಲ್ಶನ್ ಕುಮಾರ್ ಮತ್ತು ಬಿಜೆಪಿಯ ಪ್ರಮುಖ ಪ್ರಮೋದ್ ಮಹಾಜನ್ ಅವರ ಹೈ ಪ್ರೊಫೈಲ್ ಕೊಲೆ ಪ್ರಕರಣಗಳ ತನಿಖೆಯಲ್ಲೂ ವಾದ ಮಂಡಿಸಿದ್ದರು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಮುಂಬೈ ನಾರ್ತ್ ಸೆಂಟ್ರಲ್ ಸ್ಥಾನದಿಂದ ನಿಕಮ್ ಅವರನ್ನು ಕಣಕ್ಕಿಳಿಸಿತ್ತು, ಆದರೆ ಅವರು ಕಾಂಗ್ರೆಸ್‌ನ ವರ್ಷಾ ಗಾಯಕ್ವಾಡ್ ವಿರುದ್ಧ ಸೋತಿದ್ದರು. ನಿಕಮ್ ಅವರಿಗೆ 2016 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಹರ್ಷವರ್ಧನ್ ಶ್ರಿಂಗ್ಲಾ
ಶ್ರಿಂಗ್ಲಾ (Harsh Vardhan Shringla) ಜನವರಿ 2020 ಮತ್ತು ಏಪ್ರಿಲ್ 2022 ರ ನಡುವೆ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು 2023 ರಲ್ಲಿ ಭಾರತ ಆಯೋಜಿಸಿದ್ದ ಜಿ 20 ಶೃಂಗಸಭೆಯ ಮುಖ್ಯ ಸಂಯೋಜಕರಾಗಿದ್ದರು. ಇದಕ್ಕೂ ಮೊದಲು, ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಮತ್ತು ಬಾಂಗ್ಲಾದೇಶಕ್ಕೆ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ: ಬಿಬಿಎಂಪಿ ಸ್ಪಷ್ಟನೆ
ಸಿ ಸದಾನಂದನ್ ಮಾಸ್ಟರ್
ಕೇರಳದ ಶಿಕ್ಷಣತಜ್ಞ ಮತ್ತು ಕಾರ್ಯಕರ್ತರಾಗಿರುವ ಸಿ ಸದಾನಂದನ್ ಮಾಸ್ಟರ್ (C Sadanandan Master) ಅವರನ್ನು ಮೂರು ದಶಕಗಳ ಹಿಂದೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿ ಕಾಲುಗಳನ್ನು ಕತ್ತರಿಸಿದ್ದರು. 2016 ರ ಕೇರಳ ಚುನಾವಣೆಯಲ್ಲಿ ಕುತುಪರಂಬದಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು.
ಮೀನಾಕ್ಷಿ ಜೈನ್
ರಾಜಕೀಯ ತಜ್ಞೆ ಮತ್ತು ಇತಿಹಾಸಕಾರರಾಗಿರುವ ಮೀನಾಕ್ಷಿ ಜೈನ್ (Meenakshi Jain) ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2020 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅವರು ಈ ಹಿಂದೆ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.