ದಸರಾ ವೇಳೆಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ಸಿದ್ಧತೆ: ಡಿಕೆಶಿ

Public TV
2 Min Read

ಬೆಂಗಳೂರು: ಈ ವರ್ಷ ದಸರಾ (Dasara) ಹಬ್ಬದ ಜೊತೆಗೆ ಕಾವೇರಿ ಆರತಿ (Cauvery Aarti) ಕಾರ್ಯಕ್ರಮ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಬಿಡಬೇಕಿದೆ. ಕಾವೇರಿ ಆರತಿ ಘೋಷಣೆ ಮಾಡಿದ ನಂತರ ತಮಿಳುನಾಡಿಗೆ 295 ಟಿಎಂಸಿ ನೀರು ಹರಿದಿದೆ. ಆ ಮೂಲಕ 118 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದಿದೆ. ಬೆಂಗಳೂರಿನಲ್ಲೂ ಸ್ಯಾಂಕಿ ಕೆರೆಯಲ್ಲಿ ವಿಶ್ವ ಜಲದಿನದಂದು ಆರತಿ ಕಾರ್ಯಕ್ರಮ ಮಾಡಲಾಗಿತ್ತು ಎಂದು ಡಿಕೆಶಿ (DK Shivakumar) ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದೆ. ಈ ಭಾಗದ ರೈತರು ಭತ್ತ, ಕಬ್ಬು ಬೆಳೆಯುತ್ತಿದ್ದಾರೆ. ಕಾವೇರಿ ಆರತಿ ಕಾರ್ಯಕ್ರಮ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಕೊಡಗಿನಿಂದ ಹಿಡಿದು ಇಡೀ ಕರ್ನಾಟಕದ ಸಂಸ್ಕೃತಿ, ತಮಿಳುನಾಡು ಹಾಗೂ ಕೇರಳ ಸಂಪ್ರದಾಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಲು ಚರ್ಚೆ ಮಾಡಲಾಗಿದೆ. ಈ ಕಾರ್ಯಕ್ರಮ ವಾರದಲ್ಲಿ ಎಷ್ಟು ದಿನ ಇರಬೇಕು? ಪೂಜಾ ಕಾರ್ಯಗಳು ಯಾವ ರೀತಿ ನೆರವೇರಬೇಕು ಎಂದು ಚರ್ಚೆ ಮಾಡಲಾಗಿದೆ. ಕಾವೇರಿ ನದಿಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುತ್ತಿದೆ. ನಮ್ಮ ಧಾರ್ಮಿಕ ಹಾಗೂ ಸಂಸ್ಕೃತಿ ಒಳಗೊಂಡಂತೆ ಈ ಕಾರ್ಯಕ್ರಮವನ್ನು ನೀರಾವರಿ, ಪ್ರವಾಸೋದ್ಯಮ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆಸಲಾಗುವುದು ಎಂದರು. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಸಭೆ

ಈ ಕಾರ್ಯಕ್ರಮ ಸಂಬಂಧ ಬಿಡಬ್ಲ್ಯೂಎಸ್‌ಎಸ್‌ಬಿ ಮುಖ್ಯಸ್ಥರಾದ ರಾಮ್ ಪ್ರಸಾತ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮಂಡ್ಯ ಉಪ ಆಯುಕ್ತರು ಇದರ ಉಸ್ತುವಾರಿ ವಹಿಸಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಪೂಜಾ ಕಾರ್ಯಕ್ರಮಗಳ ರೂಪುರೇಷೆ ನೋಡಿಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳಲಿದೆ. ನೀರಾವರಿ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ಅಗತ್ಯ ಮೂಲಸೌಕರ್ಯ ವಹಿಸಲಾಗುವುದು. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಪ್ರವಾಸೋದ್ಯಮ ಇಲಾಖೆ ಸಲಹೆ ನೀಡಲಿದೆ. ಇದರ ಜೊತೆಗೆ ವಿಶೇಷ ದೀಪಾಲಂಕಾರ, ಕಾರಂಜಿ ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರಿಗೆ ಆಕರ್ಷಣೀಯವಾಗಿ ಕಾರ್ಯಕ್ರಮ ರೂಪಿಸಲಾಗಿದ್ದು, ಬೆಂಗಳೂರು, ಮೈಸೂರಿನಿಂದ ಜನರು ಹೋಗಿ ಪೂಜೆ ಸಲ್ಲಿಸಿ ವಾಪಸ್ ಆಗಲು ಅನುಕೂಲವಾಗುವಂತೆ ರಸ್ತೆ ಉನ್ನತೀಕರಣ ಮಾಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಳ್ಳಾರಿ | ಪಿಯುಸಿ ಟಾಪರ್‌ಗಳಿಗೆ ಸ್ಕೂಟಿ ಜೊತೆ 5 ಲಕ್ಷ ಸಹಾಯ ಮಾಡಿದ ಜಮೀರ್

ಇನ್ನು ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಸೇರಿಸಿ ಯೋಜನಾ ಪ್ರಾಧಿಕಾರವನ್ನು ಮಾಡಲು ತೀರ್ಮಾನಿಸಲಾಗಿದೆ. ಉಳಿದಂತೆ ಇದಕ್ಕೆ ಸಂಬಂಧಪಟ್ಟ ಟೆಂಡರ್ ಕರೆಯಲು ಸೂಚಿಸಲಾಗಿದೆ. ನೀರಾವರಿ ಇಲಾಖೆಯಿಂದ ಇದಕ್ಕೆ ಸುಮಾರು 100 ಕೋಟಿಯಷ್ಟು ಹಣ ಮೀಸಲಿಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕೂಡ ಇದರ ಜವಾಬ್ದಾರಿ ವಹಿಸಲಿವೆ ಎಂದು ಹೇಳಿದರು. ಇದನ್ನೂ ಓದಿ: ತುಮಕೂರಲ್ಲಿ ಎರಡು ದಿನಗಳ ಕಾಲ ಮಳೆ ಮುನ್ಸೂಚನೆ – ಯೆಲ್ಲೋ ಅಲರ್ಟ್ ಘೋಷಣೆ

ವಾರಣಾಸಿಯ ಗಂಗಾ ಆರತಿ ತಂಡವೇ ಇಲ್ಲಿಯೂ ಕಾರ್ಯಕ್ರಮ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ತುಂಗಾ ಆರತಿ, ಕಾವೇರಿ ಆರತಿ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮ ನೋಡಿದ್ದೇವೆ. ನಮ್ಮ ರಾಜ್ಯದ ತಂಡದವರೇ ಈ ಕಾರ್ಯಕ್ರಮ ಮಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು| ಯುದ್ಧ ಸನ್ನಿವೇಶ ತಂದ ಕಣ್ಣೀರು – ಭಾರತದಲ್ಲಿ ಹೆಂಡತಿ, ಪಾಕ್‌ನಲ್ಲಿ ಗಂಡ

Share This Article