ಸರ್ಕಾರಿ ಕಚೇರಿಗಳಿಗೆ ಶಾಕ್ ನೀಡಿದ ಸುನಿಲ್ ಕುಮಾರ್ 

Public TV
2 Min Read

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಬಿಲ್ ಪಾವತಿಸದ ಹಿನ್ನೆಲೆ ಇಲಾಖೆಗೆ ನಷ್ಟ ಉಂಟಾಗುತ್ತಿದೆ. ಹೀಗಾಗಿ ಕಚೇರಿಗಳಲ್ಲಿ ಪ್ರೀಪೇಡ್ ಮೀಟರ್ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ ಎನ್ನುವ ಮೂಲಕ ಸರ್ಕಾರಿ ಕಚೇರಿಗಳಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಶಾಕ್ ನೀಡಿದ್ದಾರೆ.

ಪಕ್ಷದ ಕಚೇರಿಗೆ ಸಚಿವರ ಕಡ್ಡಾಯ ಭೇಟಿಗೆ ವರಿಷ್ಟರು ಸೂಚನೆ ನೀಡುರುವ ಹಿನ್ನೆಲೆ, ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಸಚಿವರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಕೊಟ್ಟು ರೀಚಾರ್ಜ್ ಮಾಡಿದ್ರೆ ಮಾತ್ರ ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಕರೆಂಟ್ ಸಿಗುತ್ತದೆ. ಈಗಾಗಲೇ ಕೋಟ್ಯಂತರ ಬಿಲ್ ಬಾಕಿ ಇರೋದ್ರ್ರಿಂದ ಹೊಸ ನಿರ್ಧಾರ ಮಾಡಿದ್ದೇವೆ. ಶೀಘ್ರವೇ ಪ್ರೀಪೇಡ್ ಯೋಜನೆ ಆರಂಭಿಸಿ ಸರ್ಕಾರಿ ಕಚೇರಿಗಳಲ್ಲಿ ಪ್ರೀಪೇಡ್ ಮೀಟರ್ ಅಳವಡಿಕೆ ಮಾಡಲಿದ್ದೇವೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಡ್ ಮೀಟರ್ ಅಳವಡಿಕೆಗೆ ತೀರ್ಮಾನಿಸಿದ್ದೇವೆ. ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಬಿಲ್ ಬಾಕಿ ಜಾಸ್ತಿ ಉಳಿದಿದ್ದು ಸರ್ಕಾರಕ್ಕೆ ಹೊರೆಯಾಗಲಿದೆ. ಹಾಗಾಗಿ ಪ್ರಿಪೇಡ್ ಮಿಟರ್ ಅಳವಡಿಕೆಗೆ ಮುಂದಾಗಿದ್ದೇವೆ ಎಂದರು.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆ ಕಟ್ಟಿ, ವಿದ್ಯುತ್ ಸಂಪರ್ಕ ಪಡೆಯಲಾಗದವರಿಗೆ ವಿದ್ಯುತ್ ಪೂರೈಕೆ ಮಾಡುವುದು ಸಿಎಂ ಕನಸಾಗಿದೆ. ಬೆಳಕು ಯೋಜನೆಯಡಿ ನೂರು ದಿನದೊಳಗೆ ಎನ್.ಓ.ಸಿ ಇಲ್ಲದೆ ವಿದ್ಯುತ್ ನೀಡಲು ನಿರ್ಧಾರ ಮಾಡಿದ್ದೇವೆ. ಟ್ರಾನ್ಸ್‍ಫಾರ್ಮರ್ ಬ್ಯಾಂಕ್ ಮಾಡಿ, ಕೆಟ್ಟುಹೋದ 24 ಗಂಟೆಯಲ್ಲಿ ಟಿ.ಸಿ ಬದಲಾಯಿಸಲು ಸೂಚಿಸಿದ್ದೇನೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಬಡ ರೈತರು ನೀರಾವರಿ ನಿಗಮದ ಮೂಲಕ ಬೋರ್ ಕೊರೆದಿದ್ದು, ನಿಗಮದಿಂದ ಹಣ ಭರ್ತಿ ಮಾಡಬೇಕು. ನಿಗಮ ಹಣ ಪಾವತಿಸಿದ 30 ದಿನದಲ್ಲಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ:ಕೋವಿಡ್ ನಿಯಂತ್ರಣದಲ್ಲಿ ರಾಜ್ಯದಲ್ಲಿಯೇ ಮಂಡ್ಯಕ್ಕೆ ಮೊದಲ ಸ್ಥಾನ: ಅಶ್ವಥ್ ನಾರಾಯಣ್

ಹಳ್ಳಿಗಳಿಗೆ ಕೃಷಿ ಪಂಪ್ ಸೆಟ್ ಯೋಜನೆ ಮೂಲಕ ಏಳು ಗಂಟೆ ವಿದ್ಯುತ್ ಪೂರೈಕೆಗೆ ಚಿಂತನೆ ಮಾಡಲಾಗಿದೆ. ಇದಕ್ಕಾಗಿ 60ಕ್ಕೂ ಹೆಚ್ಚು ಜಾಗ ಗುರ್ತಿಸಿ, ನಿರಂತರ ವಿದ್ಯುತ್ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಹುದ್ದೆ ಖಾಲಿಯಿರುವ ಕಡೆ ಲೈನ್ ಮ್ಯಾನ್ ನೇಮಕಾತಿ, ಜೆಇ ನೇಮಕಾತಿ ಮಾಡಲಾಗುವುದು. ವರ್ಗಾವಣೆ ದಂಧೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದೇವೆ. ಸಿಎಂ ಸಲಹೆ ಮೇರೆಗೆ ವರ್ಗಾವಣೆಯಾಗಲಿದೆ ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕುವ ಸಂಸ್ಕೃತಿ ಕಡಿಮೆ ಆಗಬೇಕು. ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು. ಶಕ್ತಿ ಇರುವವರು ಬೆಂಗಳೂರಿಗೆ ಬಂದು ಅರ್ಜಿ ಹಾಕ್ತಾರೆ, ಇಲ್ಲದವರಿಗೆ ಅರ್ಜಿ ಹಾಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕದವರನ್ನು ಪರಿಗಣಿಸುತ್ತೇವೆ. ಕಲಾವಿದರನ್ನು ಗುರ್ತಿಸಲು ಡಾಟಾ ಬ್ಯಾಂಕ್ ಮಾಡಲು ನಿರ್ಧಾರ ಮಾಡಿದ್ದೇವೆ. ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ ಬಗ್ಗೆ ಚಿತ್ರಣ ತೋರಿಸಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *