ಪ್ರೇಮ್ ಪುತ್ರಿ 2ನೇ ಸಿನಿಮಾ: ಸ್ಮೈಲ್ ಗುರು ರಕ್ಷಿತ್ ಗೆ ಅಮೃತಾ ನಾಯಕಿ

Public TV
2 Min Read

ಟಗರು ಪಲ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದ ಲವ್ಲಿ ಸ್ಟಾರ್ ಪ್ರೇಮ್ ಮುದ್ದಿನ ಗೊಂಬೆ ಅಮೃತಾ ಪ್ರೇಮ್. ಚೊಚ್ಚಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಈ ಸೂರ್ಯಕಾಂತಿ ಮುಂದಿನ ಸಿನಿಮಾ ಯಾವುದು ಎಂದು ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅಮೃತಾ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಳೆದು ತೂಗಿ ಕಥೆ ಆಯ್ಕೆ ಮಾಡಿಕೊಂಡು ನಿರ್ದೇಶಕ ಮಹೇಶ್ ಬಾಬು ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಸಮ್ಮತಿ ಸೂಚಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸುಸಂದರ್ಭದಲ್ಲಿ ಚಿತ್ರತಂಡ ಅಮೃತಾ ಪ್ರೇಮ್ ಅವರನ್ನು ಸ್ವಾಗತಿಸಿದೆ. ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಅಮೃತಾ ಸಾಥ್‌ ಕೊಡುತ್ತಿದ್ದಾರೆ. ನಿರ್ದೇಶಕ ಮಹೇಶ್ ಬಾಬು ಸಾರಥ್ಯದಲ್ಲಿ ನಡೆದ 15 ದಿನಗಳ ವರ್ಕ್ ಶಾಪ್ ನಲ್ಲಿ ನಾಯಕ ರಕ್ಷಿತ್, ನಾಯಕಿ ಅಮೃತಾ ಪ್ರೇಮ್ ಸೇರಿದಂತೆ ಇಡೀ ತಂಡ ಭಾಗಿಯಾಗಿದೆ. ಇನ್ನೂ ಅಮೃತಾ ಪ್ರೇಮ್ ತಮ್ಮ ಪಾತ್ರಕ್ಕೆ ಬೇಕಾದ ಕಸರತ್ತಿನೊಂದಿಗೆ ಶೀಘ್ರದಲ್ಲಿಯೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಅಮೃತಾ ಪ್ರೇಮ್ (Amrita Prem) ನಾಯಕಿಯಾಗಿ ಅಭಿನಯಿಸಿದ್ದ ಟಗರು ಪಲ್ಯ ಸಿನಿಮಾ ವಿಶೇಷವಾಗಿಯೇ ಇತ್ತು. ಹಳ್ಳಿ ಹುಡುಗಿಯಾಗಿಯೆ ಅಮೃತಾ ಪ್ರೇಮ್ ತುಂಬಾನೆ ಹೆಚ್ಚು ಗಮನ ಸೆಳೆದಿದ್ದರು. ಮೊದಲ ಚಿತ್ರದಲ್ಲಿಯೇ ದೊಡ್ಡ ಕಲಾವಿದರ ಮುಂದೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.  ಚಿತ್ರದ ಮೂಲಕವೇ ಸೌತ್ ಫಿಲ್ಮಂ ಫೇರ್ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ದಕ್ಷಿಣದ ವಿವಿಧ ಭಾಷೆಯ ಸಿನಿಮಾಗಳಿಗೆ ವಿವಿಧ ವಿಭಾಗದಲ್ಲಿಯೇ ಪ್ರಶಸ್ತಿಯನ್ನ ಕೊಡಲಾಗುತ್ತದೆ. ಆ ರೀತಿ ಕನ್ನಡದ ಟಗರು ಪಲ್ಯದ ಚಿತ್ರದಲ್ಲಿ ನಟಿಸಿರೋ ನಟಿ ಅಮೃತಾ ಪ್ರೇಮ್, ಅತ್ಯುತ್ತಮ ಡೆಬ್ಯು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋ ಅಂತಿದ್ದ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ಇಂಡಸ್ಟ್ರಿಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ ‘ಆಕಾಶ್’, ‘ಅರಸು’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

Share This Article