ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ- ಮತ್ತೆ ರೇವಣ್ಣಗೆ ಆಹ್ವಾನ ನೀಡಿದ ಪ್ರೀತಂಗೌಡ

Public TV
3 Min Read

ಹಾಸನ: ರೇವಣ್ಣ ಅವರೇ ನಿಮಗೆ ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ತುಂಬಾ ಆಸಕ್ತಿ ಇದ್ದರೆ ನೀವು ಬಂದು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಎಂದು ಮತ್ತೊಮ್ಮೆ ಶಾಸಕ ಪ್ರೀತಂಗೌಡ ಮಾಜಿಸಚಿವ ಎಚ್.ಡಿ.ರೇವಣ್ಣ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಹೆಚ್.ಡಿ. ರೇವಣ್ಣ ಅವರ ಆಲೋಚನೆಗಳು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಗ್ಗೋದಿಲ್ಲ. ಅವರೇನು ರಾಜ ಕಾರಣ ಮಾಡುತ್ತಾರೋ ಅದೇ ರಾಜಕಾರಣವನ್ನು ನಾನು ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಪ್ರತಿಯೊಂದು ಕೆಲಸಕ್ಕೆ ಮಾಜಿ ಸಚಿವರು ಹಾಗೂ ಹೊಳೆನರಸೀಪುರದ ಶಾಸಕರಾದ ಹೆಚ್.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಿಂದೆ ನಾನು ಹೇಳಿದ್ದೇ, ನನ್ನ ವಿರುದ್ಧ ರೇವಣ್ಣ ಸ್ಪರ್ಧಿಸಿದರೆ ಐವತ್ತು ಸಾವಿರ ಓಟಿನಿಂದ ಗೆಲ್ಲುತ್ತೇನೆ ಹೇಳಿದ್ದು, ಈಗಲೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು.

ಟ್ರಕ್ ಟರ್ಮಿನಲ್ ವಿಚಾರ ಹಾಗೂ ಪದೇ ಪದೇ ಹಾಸನದ ವಿಚಾರಕ್ಕೆ ಬರುತ್ತಿದ್ದಾರೆ. ನೀವು ಮಾಜಿ ಸಚಿವರು, ನೀವು ಈಗಿರುವ ಸರ್ಕಾರದ ಭಾಗವಲ್ಲ. ನಿಮಗೆ ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ತುಂಬಾ ಆಸಕ್ತಿ ಇದ್ದರೆ, ನೀವು ಬಂದು ನನ್ನ ವಿರುದ್ಧ ಚುನಾವಣೆಗೆ ನಿಲ್ಲಿ ಎಂದು ಆಹ್ವಾನ ಕೊಟ್ಟಿರುವುದು ನೂರಕ್ಕೆ ನೂರು ಸತ್ಯ. ನನ್ನ ಹೇಳಿಕೆಯನ್ನು ಯಾರು ಯಾವ ರೀತಿಯಾದರೂ ಅರ್ಥ ಮಾಡಿಕೊಳ್ಳಲಿ. ದಿನ ಬೆಳಗ್ಗೆ ಎದ್ದು ಹಾಸನ ವಿಧಾನಸಭಾ ಕ್ಷೇತ್ರದ ವಿಚಾರಕ್ಕೆ ಬಂದಾಗ ಒಬ್ಬ ಜನಪ್ರತಿನಿಧಿಯಾಗಿ ನನಗೆ ಕಿರಿಕಿರಿ ಆಗಿರುವುದು ಸತ್ಯ ಎಂದು ತಿಳಿಸಿದರು. ಇದನ್ನೂ ಓದಿ: ಕ್ಷಮೆ ಕೇಳೋಕೆ ಸಿದ್ಧ, ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‍ಗೆ ಲಿಂಬಾವಳಿ ಟಾಂಗ್

ಹೊಳೆನರಸೀಪುರ ಶಾಸಕರಾಗಿ ಹಾಸನ ವಿಧಾನಸಭಾ ಕ್ಷೇತ್ರದ ಬಿ.ಎಂ. ರಸ್ತೆ ಒಡೆದರು. ದಾಸರಕೊಪ್ಪಲಿನ ರೈತರಿಗೆ ತೊಂದರೆ ಕೊಟ್ಟಿದ್ದಾರೆ. ಅದೇ ರೀತಿ ಸಾಕಷ್ಟು ನೋವು ಅನುಭವಿಸಿರುವವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇದ್ದಾರೆ. ಅವರ ರಾಜಕಾರಣದ ಆಲೋಚನೆಗಳು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಗ್ಗುವುದಿಲ್ಲ. ರೇವಣ್ಣ ಅವರು ನನ್ನ ವಿರುದ್ಧ ಚುನಾವಣೆಗೆ ನಿಂತರೆ ನನಗೇನು ಸಂಕೋಚವಿಲ್ಲ ಎಂದು ಹೇಳಿದರು.

ರೇವಣ್ಣ ಅವರು ಬಹಳ ಹಿರಿಯರು, ಅವರ ಬಗ್ಗೆ ಬಹಳ ಗೌರವವಿದೆ. ರಾಜಕಾರಣ ಬಂದಾಗ ನಾನು ಬಿಜೆಪಿ, ಅವರು ಜನತಾದಳ, ಅವರೇನು ಏನು ರಾಜಕಾರಣ ಮಾಡುತ್ತಾರೋ, ನಾನು ಅದೇ ರಾಜಕಾರಣ ಮಾಡುತ್ತಿದ್ದೇನೆ. ಈಗ ಅವರಿಗೆ ಚಾಲೆಂಜ್, ಪಂಥಹ್ವಾನ ಏನು ಇಲ್ಲ. ನಿಮ್ಮ ಕ್ಷೇತ್ರ ಹೊಳೆನರಸೀಪುರ ಸ್ವಾಮಿ, ನೀವು ನಿಮ್ಮ ಕ್ಷೇತ್ರದ ಕೆಲಸ ಮಾಡಿ. ನಾನು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ನಾನು ಇಲ್ಲಿ ಕೆಲಸ ಮಾಡ್ತಿನಿ ಎಂದು ಗುಡುಗಿದರು. ಇದನ್ನೂ ಓದಿ: ಬಿಜೆಪಿಯಲ್ಲೇ ಇರಿ, ಆದ್ರೆ ಎಎಪಿಗಾಗಿ ಕೆಲಸ ಮಾಡಿ: BJP ಕಾರ್ಯಕರ್ತರಲ್ಲಿ ಕೇಜ್ರಿವಾಲ್‌ ಮನವಿ

ನೀವು ಮಂತ್ರಿಯಾದರೆ ಇಡೀ ಜಿಲ್ಲೆಯ ಬಗ್ಗೆ ಯೋಚನೆ ಮಾಡಿ, ನಾನು ಮಂತ್ರಿಯಾದರೆ ಇಡೀ ಜಿಲ್ಲೆಯ ಬಗ್ಗೆ ಯೋಚನೆ ಮಾಡುತ್ತೇನೆ. ನಮ್ಮ ನಮ್ಮ ಕೆಲಸ ಮಾಡಿಕೊಂಡು ಸೌಹಾರ್ದಯುತವಾಗಿ ಜನರ ಏಳಿಗೆಗೆ ಕೆಲಸ ಮಾಡೋಣ ಎಂದು ಕುಟುಕಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಫುಲ್ ಆ್ಯಕ್ಟೀವ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಸನ ವಿಧಾನಸಭಾ ಕ್ಷೇತ್ರ ಘಟಾನುಘಟಿ ನಾಯಕರನ್ನು ಹೊಂದಿರುವ ಕ್ಷೇತ್ರ, ಜನರ ಆಶೀರ್ವಾದ, ತಾಯಿ ಹಾಸನಾಂಬೆ ಕೃಪೆಯಿಂದ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಪಕ್ಷದ ಮುಖಂಡರು ರಾಜಕಾರಣ ಹಾಗೂ ಚುನಾಯಿತ ಜನಪ್ರತಿನಿಧಿಯಾಗಲು ಪ್ರಯತ್ನ ಪಡುತ್ತಿದ್ದಾರೆ. ಅವರೆಲ್ಲರೂ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜನರ ಸೇವೆ ಮಾಡಲು ಬಂದರೆ ಬೇಡ ಅನ್ನುವ ಶಕ್ತಿ ನನ್ನಲ್ಲಿಲ್ಲ. ಅವರು ಜನರ ಕೆಲಸ ಮಾಡಲಿ, ನಾನು ಮಾಡುತ್ತೇನೆ, ಜನರಿಗೆ ಒಳಿತಾಗುವ ಕೆಲಸವನ್ನು ಮಾಡೋಣ ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *