ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಸಂಜೆ ವೇಳೆಗೆ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದಿದ್ದು ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನರಿಗೆ ವರುಣಾ ತಂಪೆರೆದಿದ್ದಾನೆ.
ಲಕ್ಷ ದ್ವೀಪ ಮತ್ತು ತಮಿಳುನಾಡಿನ ಮೇಲ್ಮೆ ಸುಳಿಗಾಳಿ ನಿರ್ಮಾಣ ಹಿನ್ನೆಲೆಯಲ್ಲಿ ಮಳೆಯಾಗುತ್ತಿದ್ದು, ನಗರದ ನೆಲಮಂಗಲ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಗೊರಗುಂಟೆಪಾಳ್ಯ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ಮಳೆಯಾಗಿದ್ದು, ವಾಹನ ಸವಾರರು ಪರಾದಾಡುವಂತಾಗಿತ್ತು. ಸತತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಇದರಿಂದಾಗಿ ಹಲವು ಭಾಗಗಳಲ್ಲಿ ಕೆಲ ಕಾಲ ವಿದ್ಯುತ್ ಸಂಪರ್ಕ ಕಡಿತವಾದ ಕುರಿತು ವರದಿಯಾಗಿದೆ.
ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ, ತುಮಕೂರು, ಗದಗ, ಮೈಸೂರು, ಹುಬ್ಬಳ್ಳಿ, ಮಡಿಕೇರಿ, ಹಾಸನ ಕೆಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇದೇ ವೇಳೆ ಭಾರೀ ಗಾಳಿ ಮಳೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಬಳಿಯ ಚೆಕ್ ಪೋಸ್ಟ್ ಮೇಲ್ಛಾವಣಿ ಹಾರಿಹೋಗಿದ್ದು, ರಸ್ತೆ ಮಧ್ಯೆ ಹಾಕಲಾಗಿದ್ದ ಬ್ಯಾರಿಕೇಡ್ ಉರುಳಿ ಬಿದ್ದಿದೆ. ಮಹಾರಾಷ್ಟ್ರ-ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿತ್ತು. ಚೆಕ್ ಪೋಸ್ಟ್ ತಗಡು ಹಾರಿ ಹೋದ ಕಾರಣದಿಂದ ಕೆಲ ಕಾಲ ಸಿಬ್ಬಂದಿ ಕಂಗಾಲಾಗಿದ್ದರು. ಇನ್ನು ಆಕಾಲಿಕ ಮಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ರೈತರ ಬೆಳೆಗಳಿಗೂ ಹಾನಿಯಾಗಿದೆ.
ಮೂರು ದಿನ ಮಳೆ ಸಾಧ್ಯತೆ: ನಾಳೆಯಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಲಕ್ಷದ್ವೀಪ ಮತ್ತು ತಮಿಳುನಾಡಿನಲ್ಲಿ ಭಾಗದಲ್ಲಿ ಮೇಲ್ಮೆ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಟ್ರಫ್ ನಿರ್ಮಾಣದಿಂದ ಮಳೆಯಾಗುವುದಾಗಿ ತಿಳಿಸಿದ್ದಾರೆ. ಇನ್ನೂ ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಭಾಗ ಮತ್ತು ಉತ್ತರ ಕರ್ನಾಟಕದ ಹಾಗೂ ಮಲೆನಾಡು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ.
ಮತದಾನಕ್ಕೆ ವರುಣನ ಅಡ್ಡಿ ಸಾಧ್ಯತೆ..?
ರಾಜ್ಯದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗುವ ಸಂಭವಿರುವುದರಿಂದ ಶನಿವಾರ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಮಳೆ ಅಡ್ಡಿಯಗುವ ಸಂಭವಿದೆ.