ಮಂಗಳೂರು/ಮಡಿಕೇರಿ: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ಕತಾರ್‌ನಿಂದ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಅಬ್ದುಲ್ ರೆಹಮಾನ್ ನನ್ನ ಬಂಧಿಸಿದ್ದಾರೆ.
2022ರ ಜುಲೈ 26ರಂದು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರು ಕರ್ನಾಟಕದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ದೆಹಲಿ ಕಚೇರಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಎನ್‌ಐಎ ಓರ್ವ ಪ್ರಮುಖ ಆರೋಪಿ ಅತೀಖ್ ಅಹ್ಮದ್ ಸೇರಿ 22 ಆರೋಪಿಗಳನ್ನ ಬಂಧಿಸಿತ್ತು. ಒಟ್ಟು 28 ಆರೋಪಿಗಳ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಿದ್ದ ಎನ್‌ಐಎ ಉಳಿದ 6 ಆರೋಪಿಗಳಿಗೆ ತೀವ್ರ ಹುಡುಕಾಟ ನಡೆಸಿತ್ತು.
ನಿಷೇಧಿತ ಸಂಘಟನೆ ಪಿಎಫ್‌ಐ ಸೂಚನೆಯಂತೆ ಹತ್ಯೆ ನಡೆದಿತ್ತು. ಪ್ರಕರಣದ ಇತರ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ವಿದೇಶಕ್ಕೆ ಹಾರಿದ್ದ ಅಬ್ದುಲ್ ರಹಿಮಾನ್ ಇಂದು ಬಂಧನವಾಗಿದ್ದಾನೆ.
ಹಂತಕರಿಗೆ ಕೊಡಗಿನಲ್ಲಿ ಆಶ್ರಯ
ಬಂಧಿತನಾಗಿರುವ ಅಬ್ದುಲ್ ರೆಹಮಾನ್ ಕೊಡಗಿನ ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ಗ್ರಾಮದವನಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಹಂತಕರಿಗೆ ಆಶ್ರಯ ನೀಡಿದ್ದ. ನೆಟ್ಟಾರು ಹತ್ಯೆ ಬಳಿಕ ವಿದೇಶಕ್ಕೆ ಹಾರಿದ್ದ ರೆಹಮಾನ್ ಕತಾರ್‌ನ ದೋಹಾದಲ್ಲಿ ತಲೆಮರೆಸಿಕೊಂಡಿದ್ದ. ಹೀಗಾಗಿ ರೆಹಮಾನ್ ಸೇರಿದಂತೆ ಉಳಿದ 6 ಆರೋಪಿಗಳ ಸುಳಿವು ಕೊಟ್ಟವರಿಗೆ ಎನ್‌ಐಎ ಬಹುಮಾನ ಘೋಷಿಸಿತ್ತು. ಸದ್ಯ ರೆಹಮಾನನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮುಂದಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಳಿದ ಆರೋಪಿಗಳಿಗೂ ಎನ್‌ಐಎ ತಂಡ ಬಲೆ ಬೀಸಿದೆ.