– ಇನ್ನೇನು ಕಷ್ಟಗಳೆಲ್ಲಾ ಕಳೆಯಿತು ಅನ್ನುವಾಗಲೇ ಜವರಾಯ ಹೊತ್ತೊಯ್ದ
– ಮಗನ ಸಾವಿನ ಸುದ್ದಿ ಕೇಳಿ ಗೋಳಾಡಿದ ತಾಯಿ
ಹಾಸನ\ಬಳ್ಳಾರಿ: ಹಾಸನದ (Hassan) ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ (Ganesh Procession) ವೇಳೆ ಟ್ರಕ್ ಹರಿದು ಬಳ್ಳಾರಿಯ ಪ್ರವೀಣ್ ಮೃತಪಟ್ಟಿದ್ದು, ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಬಳ್ಳಾರಿಯ (Ballary) ನಾಗಲಕೆರೆ ಏರಿಯಾದ ಪ್ರವೀಣ್ ಮೃತ ದುರ್ದೈವಿ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಹಾಸನಕ್ಕೆ ಬಂದಿದ್ದ ಪ್ರವೀಣ್, ಶುಕ್ರವಾರ ಗಣೇಶ ವಿಸರ್ಜನೆ ವೇಳೆ ನಡೆದ ಘನಘೋರ ದುರಂತದಲ್ಲಿ ಉಸಿರುಚೆಲ್ಲಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಪ್ರವೀಣ್ ತಾಯಿ ಸುಶೀಲಾ ಆರೈಕೆಯಲ್ಲೇ ಬೆಳೆದಿದ್ದ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ದುರಂತ – ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿದ್ಯಾರ್ಥಿ ದುರ್ಮರಣ
ಕಿತ್ತು ತಿನ್ನುವ ಬಡತನವಿದ್ದರೂ ಮನೆಗೆಲಸ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಮಗನನ್ನು ತಾಯಿ ಇಂಜಿನಿಯರಿಂಗ್ ಓದಿಸುತ್ತಿದ್ದರು. ಬಳ್ಳಾರಿಯಲ್ಲಿ ಡಿಪ್ಲೊಮಾ ಮುಗಿಸಿ, ಹಾಸನದಲ್ಲಿ ಇಂಜಿನಿಯರಿಂಗ್ ಮಾಡಲು ತೆರಳಿದ್ದ ಪ್ರವೀಣ್, ಎಲೆಕ್ಟ್ರಾನಿಕ್ ವಿಭಾಗದ ಕೊನೆಯ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡ್ತಿದ್ದ. ಮಗ ಇನ್ನೇನು ಕೆಲಸಕ್ಕೆ ಸೇರಿ ತನ್ನ ಕಷ್ಟಗಳೆಲ್ಲ ಕಳೆಯುತ್ತದೆ ಅಂದುಕೊಂಡಿದ್ದ ತಾಯಿಗೆ ಪ್ರವೀಣ್ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ
ಇದೀಗ ಪ್ರವೀಣ್ ಮೃತದೇಹ ಬಳ್ಳಾರಿಯ ಮನೆಗೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಮೃತದೇಹ ನೋಡಿ ತಾಯಿ ನನಗ್ಯಾರು ದಿಕ್ಕೆಂದು ಎದೆ ಬಡಿದುಕೊಂಡು ಗೋಳಾಡಿದ್ದಾರೆ. ತಾಯಿಯ ಸ್ಥಿತಿ ಕಂಡು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.