Prathima Murder Case – ಮನೆಯ ಬಾಗಿಲು ತೆರೆಯುತ್ತಿದ್ದಂತೆ ಹಿಂದಿನಿಂದ ದಾಳಿ

Public TV
2 Min Read

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಕಚೇರಿಯಿಂದ ಮನೆಗೆ ಆಗಮಿಸಿದ ಪ್ರತಿಮಾ (Prathima) ಅವರು ಬಾಗಿಲು ತೆರೆಯುತ್ತಿದ್ದಂತೆ ಹತ್ಯೆ (Murder) ಮಾಡಲಾಗಿದೆ.

ಹೌದು. ಶನಿವಾರ ರಾತ್ರಿ 7:45 ಕ್ಕೆ ಪ್ರತಿಮಾ ಆಫೀಸ್ ಬಿಟ್ಟಿದ್ದು ಮನೆ ಬಳಿ ಬಂದಾಗ 8:30 ಆಗಿತ್ತು. ಮಳೆ ಬರುತ್ತಿದ್ದ ಕಾರಣ ಡ್ರೈವರ್ ಬಳಿ ಹೇಗೆ ಹೋಗ್ತೀಯ ಎಂದು ಕೇಳಿದ್ದರು. ಡ್ರೈವರ್‌ ಪ್ರತಿಮಾರನ್ನು ಇಳಿಸಿ ಕಾರು ಪಾರ್ಕ್ ಮಾಡಿ ಬೈಕಿನಲ್ಲಿ ತೆರಳಿದ್ದರು. ಇದನ್ನೂ ಓದಿ: ಉಪನಿರ್ದೇಶಕಿ ಹತ್ಯೆ ಪ್ರಕರಣ- ವಿಚ್ಛೇದನ ಪಡೆದಿದ್ರಿಂದ ಬೆಂಗಳೂರಲ್ಲಿ ಒಂಟಿಯಾಗಿದ್ದರು ಪ್ರತಿಮಾ

ಕಾರಿನಿಂದ ಇಳಿದು ಪ್ರತಿಮಾ ಮೊದಲ ಮಹಡಿಯಲ್ಲಿರುವ ಮನೆಗೆ ಬಂದಿದ್ದರು. ಮನೆಯ ಡೋರ್ ತೆಗೆಯುತ್ತಿದ್ದಂತೆ ಹಿಂದಿನಿಂದ ದಾಳಿ ಮಾಡಲಾಗಿದೆ. ಈ ವೇಳೆ ಪ್ರತಿಮಾರ ಬಾಯಿಯನ್ನು ಮುಚ್ಚಿ ಒಳಗೆ ಎಳೆದುಕೊಂಡು ಹೋಗಲಾಗಿದೆ. ದಾಳಿಯಿಂದಾಗಿ ಪ್ರತಿಮಾ ಧರಿಸುತ್ತಿದ್ದ ಕನ್ನಡಕ ಬಾಗಿಲ ಬಳಿಯೇ ಬಿದ್ದಿದೆ. ಪ್ರತಿಮಾ ಆಫೀಸ್‌ಗೆ ಕೊಂಡೊಯ್ದಿದ್ದ ಲಂಚ್ ಬಾಕ್ಸ್ ಕೂಡ ಬಾಗಿಲಿನಲ್ಲೇ ಸಿಕ್ಕಿದೆ.

ಪ್ರತಿಮಾ ಕಿರುಚಾಡುವುದು ಯಾರಿಗೂ ತಿಳಿಯಬಾರದು ಎಂದು ಬಾಯಿ ಮುಚ್ಚಿ ಕುತ್ತಿಗೆಗೆ ಹಗ್ಗ ಕಟ್ಟಲಾಗಿದೆ. ನಂತರ ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.  ಬಹಳ ಪೂರ್ವನಿಯೋಜಿತ ಪ್ಲ್ಯಾನ್‌ ಮಾಡಿಕೊಂಡು ಈ ಕೃತ್ಯವನ್ನು ಎಸಗಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆದಿದ್ದೇ ಪ್ರತಿಮಾ ಕೊಲೆಗೆ ಕಾರಣವಾಯ್ತಾ? – ಹಲವು ಆಯಾಮಗಳಲ್ಲಿ ಪೊಲೀಸ್‌ ತನಿಖೆ

ರಾತ್ರಿ 8:30ಕ್ಕೆ ಸಹೋದರ ಪ್ರತಿಮಾಗೆ ಕರೆ ಮಾಡಿದ್ದಾರೆ. ಕಾಲ್‌ ತೆಗೆಯದ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ಕರೆ ಮಾಡಿ ಮಾಡಿದ್ದಾರೆ. ಈಗಲೂ ಕರೆ ಸ್ವೀಕರಿಸದ ಕಾರಣ 9:30ಕ್ಕೆ ಮತ್ತು 10 ಗಂಟೆಗೆ ಕರೆ ಮಾಡಿದ್ದರು. 4 ಬಾರಿಯೂ ಕರೆ ಸ್ವೀಕರಿಸದ ಕಾರಣ ಎಲ್ಲೋ ರೇಡ್‌ಗೆ ಹೋಗಿರಬಹುದು ಎಂದು ಸಹೋದರ ಸುಮ್ಮನಾಗಿದ್ದರು.

ಬೆಳಗ್ಗೆ 8 ಗಂಟೆಗೆ ಪ್ರತಿಮಾ ಮನೆ ಬಳಿ ಸಹೋದರ ಬಂದಿದ್ದರು. ಈ ವೇಳೆ ಕಬ್ಬಿಣದ ಡೋರ್ ಒಳಗಿನಿಂದ ಲಾಕ್ ಆಗಿತ್ತು. ಲಾಕ್ ತೆಗೆದು ಒಳಹೋದಾಗ ತಂಗಿಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ (Department of Mines and Geology) ಉಪನಿರ್ದೇಶಕಿಯಾಗಿದ್ದ ಪ್ರತಿಮಾ ಅವರನ್ನು ಶನಿವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

 

Share This Article