ತರಾಟೆ ವಿಚಾರ: ಫೇಸ್‍ಬುಕ್ ಲೈವ್ ಮೂಲಕ ಪ್ರತಾಪ್ ಸಿಂಹ ಸ್ಪಷ್ಟನೆ

Public TV
2 Min Read

ಮೈಸೂರು: ಸಂಸದ ಪ್ರತಾಪ್ ಸಿಂಹರವರವರಿಗೆ ಬಿಜೆಪಿ ಮುಖಂಡ ಎಂ.ಬಿ. ದೇವಯ್ಯನವರು ತರಾಟೆ ತೆಗೆದುಕೊಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿ, ಮಾಧ್ಯಮಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿದ ಅವರು, ಕೆಲವು ರಾಜಕಾರಣಿಗಳು ರೆಸಾರ್ಟ್ ಮಾಡಲು ನೂರಾರು ಎಕರೆ ಕನ್ವರ್ಟ್ ಮಾಡಿಸುತ್ತಿದ್ದಾರೆ, ಹೀಗಾಗಿ ಕನ್ವರ್ಷನ್ ಮಾಡಲು ಕೊಡಬೇಡಿ ಎಂದು ಪರಿಶೀಲನೆ ತಂಡಕ್ಕೆ ಹೇಳುತ್ತಿದ್ದೆ. ಈ ವೇಳೆ ಎಂ.ಬಿ.ದೇವಯ್ಯನವರು ಹುಚ್ಚುಚ್ಚಾಗಿ ಕೂಗಾಡಿದರು. ಅವರ ಆತನ ವಯಸ್ಸಿಗೆ ಗೌರವ ಕೊಟ್ಟು ನಾನು ಮಾತನಾಡಲಿಲ್ಲ. ಮಾತನಾಡಿದರೆ ವಯಸ್ಸಾದವರ ಜೊತೆ ಮಾತನಾಡಿದ ಅಂತ ಮಾಧ್ಯಮದವರು ಹೇಳುತ್ತಿದ್ದರು. ಈ ಕಾರಣಕ್ಕೆ ನಾನು ಮಾತನಾಡಲಿಲ್ಲ. ಈ ಸಣ್ಣ ವಿಚಾರವನ್ನು ಸಹ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿದ್ದವು. ಈ ಹಿಂದೆ ಕೊಡಗಿನ ಪರಿಹಾರ ಕೇಂದ್ರಕ್ಕೆ ಬಿಎಸ್ ವೈ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಮಾಧ್ಯಮಗಳ ವಿರುದ್ಧ ಮಾತನಾಡಿದ್ದರು. ಅದನ್ನು ಮಾಧ್ಯಮಗಳು ಏಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಮೊದಲು ನನ್ನ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಗೆ ಹೊಡೆಯಲು ಹೇಳಿದ್ದೆ. ಆತನಿಗೆ ನಾಲ್ಕು ತದಕಿದ ಮೇಲೆ ಮತ್ತೆ ಆತ ನನ್ನ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾಗಲಿಲ್ಲ. ಅದಕ್ಕೆ ದಡ್ಡರಿಗೆ ದೊಣ್ಣೆ ಪೆಟ್ಟು ಅಂತಾ ಹೇಳುತ್ತಾರೆ. `ಹುಣಸೂರು ತಾಲೂಕಿನಲ್ಲಿ ಒಬ್ಬ ಯುವಕ ಪ್ರತಿ ಬಾರಿ ನನ್ನ ಕಾರ್ಯಕ್ರಮಕ್ಕೆ ಬಂದು ಕಿರಿಕಿರಿ ಮಾಡುತ್ತಿದ್ದ. ಎಷ್ಟು ಕೇಳಿದ್ರೂ ಆತನ ಉಪಟಳ ನಿಲ್ಲಲಿಲ್ಲ. ಆ ಸಂದರ್ಭದಲ್ಲಿ ನಾನು ಆತನಿಗೆ ನಾಲ್ಕು ತದಕಿ ಅಂತಾ ನನ್ನ ಬೆಂಬಲಿಗರಿಗೆ ಹೇಳಿದೆ. ಅವರು ಅವನಿಗೆ ತದಕಿದರು. ಅವತ್ತಿನಿಂದ ಆತನ ಸುಳಿವೇ ಇಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಈ ರೀತಿ ನಮಗೆ ತೊಂದರೆ ಕೊಡುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.

ನಡೆದಿದ್ದೇನು?
ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಕೇಂದ್ರದಿಂದ ಬಂದಿದ್ದ ತಂಡಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಗುರುವಾರ ಕೇಂದ್ರದ ಪರಿಶೀಲನೆ ತಂಡದೊಂದಿಗೆ ಸಂಸದ ಪ್ರತಾಪ್ ಸಿಂಹರವರು ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಕೇಂದ್ರ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಸದರ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. `ನೀವು ಕೇಂದ್ರದ ಪರಿಶೀಲನೆ ತಂಡಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಿ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಾ ಎಂದು ತೀವ್ರವಾಗಿ ಹರಿಹಾಯ್ದರು.

ನಿಮ್ಮಂಥವರಿಂದ ಪಕ್ಷ ಉದ್ಧಾರ ಆಗಲ್ಲ. ನೀವು ಮೊದಲು ನಮ್ಮ ಪಕ್ಷದ ಸಂಸದ ಎಂಬುದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ನನ್ನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಿರೋ ತೆಗೆದುಕೊಳ್ಳಿ ಎಂದು ಖಾರವಾಗಿ ನುಡಿದರು. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಸಹ ಉಪಸ್ಥಿತರಿದ್ದರು. ಬಿಜೆಪಿಯ ಹಿರಿಯ ಮುಖಂಡರ ಹೇಳಿಕೆಯಿಂದ ಸಂಸದ ಪ್ರತಾಪ್ ಸಿಂಹ ತೀವ್ರ ಮುಜುಗರಕ್ಕೊಳಗಾಗಿ ಸ್ಥಳದಿಂದ ತೆರಳಿದರು ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *