ಉತ್ತಮ ಸಂದೇಶದ ಮನರಂಜನಾತ್ಮಕ ಸಿನಿಮಾ ‘ಬಿಳಿಚುಕ್ಕಿ ಹಳ್ಳಿಹಕ್ಕಿ’: ಪ್ರತಾಪ್ ಸಿಂಹ ಬಣ್ಣನೆ

Public TV
2 Min Read

– ಹೊಸತನದ ಸಿನಿಮಾ ನೋಡಿ ಪ್ರೋತ್ಸಾಹಿಸಿ: ಪ್ರೇಕ್ಷಕರಲ್ಲಿ ಮಾಜಿ ಸಂಸದ ಮನವಿ

ಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ದೇಶನ, ನಿರ್ಮಾಣ ಮಾಡಿ ನಾಯಕನಾಗಿ ನಟಿಸಿರುವ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ’ (Bilichukki Hallihakki). ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ಅಂದರೆ, ಅ.24 ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಬಿಡುಗಡೆಯ ಅಂಚಿನಲ್ಲಿರುವ ಈ ಸಿನಿಮಾದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಭಿನ್ನ ಒಳನೋಟದ ಒಂದಷ್ಟು ಮಾತುಗಳನ್ನಾಡಿದ್ದಾರೆ.

ತೊನ್ನೆಂಬ ಸಮಸ್ಯೆಯ ಭೂಮಿಕೆಯಲ್ಲಿರುವ, ಪಕ್ಕಾ ಮನರಂಜನಾತ್ಮಕ ಗುಣ ಹೊಂದಿರುವ ಈ ಸಿನಿಮಾ ಸಾರಥಿ ಮಹೇಶ್ ಗೌಡರನ್ನು (Mahesh Gowda) ಮೆಚ್ಚಿಕೊಳ್ಳುತ್ತಲೇ, ಬಿಳಿಚುಕ್ಕಿ ಹಳ್ಳಿಹಕ್ಕಿಯನ್ನು ನೋಡಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರಲ್ಲಿ ಪ್ರತಾಪ್‌ ಸಿಂಹ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಮುರುಳಿ ಸಮ್ಮುಖದಲ್ಲಿ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಟ್ರೈಲರ್ ರಿಲೀಸ್‌

ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಹೊಸ ಬಗೆಯ ಪ್ರಯತ್ನಗಳಾಗುತ್ತಿವೆ. ಕಾಂತಾರ ಸಿನಿಮಾ ಸೀಮಿತ ಬಜೆಟ್ಟಿನಲ್ಲಿ ತಯಾರಾಗಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಅದರ ಅಧ್ಯಾಯ ಒಂದು ಕೂಡಾ ದೊಡ್ಡ ಗೆಲುವು ದಾಖಲಿಸಿದೆ. ಇತ್ತೀಚೆಗೆ ತೆರೆಕಂಡಿದ್ದ ಸು ಫ್ರಂ ಸೋ ಕೂಡಾ ಗೆಲುವು ಕಂಡಿದೆ. ಈ ಗೆಲುವಿನ ಸರಣಿಯ ಭಾಗವೆಂಬಂತೆ ಇದೀಗ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರವೂ ಬಿಡುಗಡೆಯ ಹೊಸ್ತಿಲಲ್ಲಿದೆ. ಇಂಥಾ ಹೊಸತನದ ಸಿನಿಮಾವನ್ನು ಗೆಲ್ಲಿಸಿದರೆ ಮಹೇಶ್ ಗೌಡ ಅವರ ಕಡೆಯಿಂದ ಮತ್ತೊಂದಷ್ಟು ಒಳ್ಳೆ ಸಿನಿಮಾಗಳು ರೂಪುಗೊಳ್ಳುತ್ತವೆಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಈ ಸಿನಿಮಾದ ಕಥನವನ್ನು ಸೂಕ್ಷ್ಮವಾಗಿ ಅವಲೋಕಿಸಿದಂತಿರುವ ಪ್ರತಾಪ್ ಸಿಂಹ (Pratap Simha), ಯಾರನ್ನೇ ಆದರೂ ಅವರ ದೈಹಿಕ ನ್ಯೂನತೆಗಳು ಮತ್ತು ಕಾಯಿಲೆಗಳ ಮೂಲಕ ಮಾನಸಿಕವಾಗಿ ಕುಗ್ಗಿಸುವಂತೆ ಮಾಡೋದು ಸರಿಯಲ್ಲ. ತೊನ್ನು ಕೂಡಾ ಸಾಮಾನ್ಯವಾದೊಂದು ದೈಹಿಕ ಸಮಸ್ಯೆ. ಇಂಥ ಸಮಸ್ಯೆಗಳ ನಡುವೆಯೂ ಎದೆಗುಂದದೆ ಬದುಕಬೇಕೆಂಬ ಸಂದೇಶದೊಂದಿಗೆ, ಮನರಂಜನಾತ್ಮಕವಾಗಿ ಈ ಸಿನಿಮಾ ಮೂಡಿ ಬಂದಿದೆ. ಮಹೇಶ್ ಗೌಡ ಅವರಿಗೆ ಇದರೊಂದಿಗೆ ಗೆಲುವು ಸಿಕ್ಕಲಿ. ಇಂಥಾ ಚೆಂದದ ಇನ್ನೊಂದಷ್ಟು ಪ್ರಯತ್ನಗಳನ್ನು ನಡೆಸಲು ತಾಯಿ ಚಾಮುಂಡೇಶ್ವರಿ ಅವರಿಗೆ ಶಕ್ತಿ ಕೊಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ʻಬಿಳಿಚುಕ್ಕಿ ಹಳ್ಳಿಹಕ್ಕಿʼಯ ಹಾಡುಗಳಿಗೆ ವ್ಯಾಪಕ ಮೆಚ್ಚುಗೆ!

ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ಭಟ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಗೊಂಡಿರುವ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರ ಬೆನ್ನಲ್ಲಿಯೇ ಬಿಡುಗಡೆಗೊಂಡಿರುವ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿ ತೆರೆಗಾಣಲು ದಿನಗಣನೆ ಶುರುವಾಗಿದೆ.

Share This Article