ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಘೋಷಣೆ

Public TV
2 Min Read

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರತೊಡಗಿದೆ. ಇವತ್ತು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿಯ ಅಭ್ಯರ್ಥಿ ಇವತ್ತು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದರು.

ಮೊದಲು ಬಿಜೆಪಿಯ ಅಭ್ಯರ್ಥಿ ಪ್ರತಾಪ್‍ಸಿಂಹ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಡಿಸಿಎಂ ಅರ್ ಅಶೋಕ್, ಮಾಜಿ ಸಚಿವ ಎಸ್.ಎ ರಾಮದಾಸ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು. ಇದಕ್ಕೂ ಮುನ್ನ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಪ್ರಚಾರಕ್ಕೆ ಆಗಮಿಸುತ್ತಾರೆ ಎಂದು ತಿಳಿಸಿದರು.

ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ ಸಹ ನಾಮಪತ್ರ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗಿ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್ ಶಾಸಕರಾದ ಡಾ.ಯತೀಂದ್ರ ಸೇರಿ ಹಲವರು ಸಾಥ್ ನೀಡಿದರು. ಆದರೆ ಮೈತ್ರಿ ಪಕ್ಷದ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕೊನೆ ಕ್ಷಣದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಚಿವ ಸಾ.ರಾ ಮಹೇಶ್ ಕೈ ನಾಯಕರಿಗೆ ಸಾಥ್ ನೀಡಿದರು.

ಪ್ರತಾಪ್ ಸಿಂಹ್ ಆಸ್ತಿ ವಿವರ:
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಚುನಾವಣೆಯ ಅಫಿಡವಿಡ್‍ನಲ್ಲಿ ಆಸ್ತಿ ವಿವರ ಘೋಷಣೆ ಮಾಡಿದ್ದು, ಕಳೆದ ಚುನಾವಣೆಯಲ್ಲಿ ಘೋಷಿಸಿಸಿದ್ದಕ್ಕಿಂತ ಅಲ್ಪ ಪ್ರಮಾಣದ ಆಸ್ತಿ ಏರಿಕೆ ಆಗಿದೆ. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಆಸ್ತಿಯಲ್ಲಿ 7,29,380 ಲಕ್ಷ ರೂ ಹೆಚ್ಚಳವಾಗಿದ್ದು, ಚರಾಸ್ತಿ 11,09,697 ಹೊಂದಿದ್ದರೆ, ಸ್ಥಿರಾಸ್ತಿ 52,05,000 ರೂ. ಇದ್ದು, 23,64,087 ಸಾಲ ಹೊಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ಪ್ರತಾಪ್ ಸಿಂಹ 7.85.317 ರೂ. ಚರಾಸ್ತಿ, 48,00,000 ರೂ. ಸ್ಥಿರಾಸ್ತಿ ಹಾಗೂ 43,99,048 ಸಾಲ ಹೊಂದಿದ್ದರು. ಚರಾಸ್ತಿಯಲ್ಲಿ 3,24,380 ರೂ., ಸ್ಥಿರಾಸ್ತಿಯಲ್ಲಿ 4,05,000 ಏರಿಕೆ ಆಗಿದ್ದು, 20,34,961 ರೂ. ಸಾಲದಲ್ಲಿ ಇಳಿಕೆ ಆಗಿದೆ.

ಪತ್ನಿ ಅರ್ಪಿತಾ ಸಿಂಹ ಹೆಸರಿನಲ್ಲಿ 40,35,435 ರೂ. ಚರಾಸ್ತಿ, 81,50,000 ರೂ. ಸ್ಥಿರಾಸ್ತಿ ಇದ್ದು, 23,74,917 ಸಾಲ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅರ್ಪಿತಾ ಅವರ ಹೆಸರಿನಲ್ಲಿ 4,36,274 ರೂ. ಚರಾಸ್ತಿ, 30,00,00 ರೂ. ಸ್ಥಿರಾಸ್ತಿ ಹೊಂದಿದ್ದರು. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಕುಟುಂಬದಿಂದ ಒಟ್ಟು 1 ಕಾರು, 360 ಗ್ರಾಂ ಚಿನ್ನ ಹೆಚ್ಚುವರಿಯಾಗಿ ಘೋಷಣೆ ಆಗಿದೆ. ಅಲ್ಲದೇ ಪತ್ನಿ ಹೆಸರಿನಲ್ಲಿ 23,74,917 ಲಕ್ಷ ರೂ. ಸಾಲ ಹೆಚ್ಚುವರಿಯಾಗಿ ಘೋಷಣೆ ಆಗಿದ್ದು, ಪುತ್ರಿ ಹೆಸರಿನಲ್ಲಿ 1,22,623 ರೂ. ಲೈಫ್ ಇನ್ಸೂರೆನ್ಸ್ ಘೋಷಣೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *