ಬೆಂಗಳೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಇನ್ನೂ ಪೊಲಿಟಿಕಲ್ ಮೆಚ್ಯೂರಿಟಿ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹುಣುಸೂರು ಹನುಮ ಜಯಂತಿ ಘಟನೆಗೆ ಕೆಂಪಯ್ಯ ಕಾರಣ ಎಂದು ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರತಾಪ್ ಸಿಂಹಗೆ ಪೊಲಿಟಿಕಲ್ ಮೆಚ್ಯುರಿಟಿ ಬರಬೇಕು. ಆದರೆ ಅವರಿಗೆ ಮೆಚ್ಯುರಿಟಿ ಇಲ್ಲ. ಜನರ ಪ್ರತಿನಿಧಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ಸಹಕರಿಸಬೇಕು. ಅದು ಬಿಟ್ಟು ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ಒಂದು ವೇಳೆ ಶಾಂತಿ ಕದಡುವ ಕೆಲಸ ಮಾಡಿದರೆ, ಅದನ್ನ ನಿಯಂತ್ರಣ ಮಾಡೋದು ವಿಪಕ್ಷ ಕೆಲಸವಲ್ಲ. ಅದು ಸರ್ಕಾರದ ಕೆಲಸ. ಆದ್ದರಿಂದ ಸರ್ಕಾರವೇ ಆ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ಪೊಲೀಸರು ನಿಗದಿ ಮಾಡಿದ ರಸ್ತೆಯಲ್ಲಿ ಮೆರವಣಿಗೆ ಹೋಗಬೇಕಿತ್ತು. ಆದರೆ ಪ್ರತಿಷ್ಠೆಗಾಗಿ ಬೇರೆ ಮಾರ್ಗದಲ್ಲಿ ಹೋಗಿದ್ದಾರೆ. ಸಮಾಜದಲ್ಲಿ ಶಾಂತಿ ಹಾಳು ಮಾಡೋ ಸಲುವಾಗಿ ಈ ರೀತಿ ಮಾಡಿದ್ದಾರೆ. ಇದಕ್ಕೆಲ್ಲಾ ಸರ್ಕಾರ ಅವಕಾಶ ಮಾಡಿಕೊಡಲ್ಲ. ಇದರಲ್ಲಿ ಕೆಂಪಯ್ಯ ಪಾತ್ರ ಏನು ಇಲ್ಲ ಎಂದು ಪ್ರತಾಪ್ ಸಿಂಹ ಮಾಡಿದ್ದ ಆರೋಪದ ವಿರುದ್ಧ ತಿರುಗೇಟು ನೀಡಿದರು.
ಎಸ್.ಪಿ.ರವಿ ಚನ್ನಣ್ಣನವರ್‍ಗೆ ಕೆಂಪಯ್ಯ ಮಾತಾಡಿದರೆ ತಪ್ಪೇನು? ಯಾಕೆ ಮಾತಾಡಬಾರದು. ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಮಾತಾಡಿದ್ರೆ ಏನು ತಪ್ಪಿದೆ? ಅವರು ಗೃಹ ಇಲಾಖೆ ಸಲಹೆಗಾರರಾಗಿದ್ದು ಯಾಕೆ ಕೇಳಬಾರದು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್ ನಲ್ಲಿ ನೀವು ಪೊಲೀಸ್ ಇಲಾಖೆಗೆ ನಿಷ್ಠರೋ, ಕೆಂಪಯ್ಯ ಅವರಿಗೆ ನಿಷ್ಠರೋ. ನಿಮ್ಮ ಮಾಸ್ಟರ್ ಯಾರು ಅಂತ ನನಗೆ ಗೊತ್ತಿದೆ. ಕರ್ತವ್ಯದ ಹೆಸರಿನಲ್ಲಿ ಜಿಲ್ಲಾಧಿಕಾರಿಗಳನ್ನು ಎಳೆದು ತರಬೇಡಿ ಎಂದು ಮೈಸೂರು ಎಸ್‍ಪಿ ರವಿಚನ್ನಣ್ಣನವರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
https://www.youtube.com/watch?v=4lHDGBADYCs