ರತ್ನಮಂಜರಿ: ಸಾಫ್ಟ್‌ವೇರ್ ಜಗತ್ತಿಂದ ಬಣ್ಣದ ಲೋಕಕ್ಕೆ ಬಂದ ಪ್ರತಿಭಾವಂತ ಪ್ರಸಿದ್ಧ್!

Public TV
2 Min Read

ಬೆಂಗಳೂರು: ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಗೌರವಾನ್ವಿತ ಕೆಲಸ. ತಿಂಗ ತಿಂಗಳು ಕೈ ಸೇರೋ ದೊಡ್ಡ ಮೊತ್ತದ ಸಂಬಳ. ಆರ್ಥಿಕವಾಗಿ ಬದುಕಿಗೆ ಯಾವ ತತ್ವಾರವೂ ಇಲ್ಲ ಎಂಬಂಥಾ ನಿರಾಳ ಸ್ಥಿತಿಗತಿ… ಇದು ಬಹುತೇಕರು ಕಲ್ಪಿಸಿಕೊಳ್ಳುವ ಸ್ವರ್ಗದಂಥಾ ಬದುಕಿನ ಚಿತ್ರ. ಆದರೆ ಅದೆಲ್ಲವೂ ದಕ್ಕಿದರೂ ಕೂಡಾ ಬೇರೇನನ್ನೋ ಧ್ಯಾನಿಸುವಂಥಾ ಮನಸುಗಳೂ ನಮ್ಮ ನಡುವಲ್ಲಿವೆ. ಈ ಥರದ ಧ್ಯಾನವೆಲ್ಲ ಬಹುಪಾಲು ಸಿನಿಮಾ ಕೇಂದ್ರಿತವಾದದ್ದೆಂಬುದು ಗೊತ್ತಿರೋ ವಿಚಾರವೇ. ಹಾಗೆ ಸಾಫ್ಟ್‌ವೇರ್ ಲೋಕದಿಂದ ಬಂದು ಚಿತ್ರರಂಗಕ್ಕೆ ಹೊಸಾ ಆಲೋಚನೆಯನ್ನು ಹೊತ್ತುತಂದ ಅನೇಕರಿದ್ದಾರೆ. ಆ ಸಾಲಿನಲ್ಲಿ ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ರತ್ನಮಂಜರಿ ಚಿತ್ರದ ನಿರ್ದೇಶಕ ಪ್ರಸಿದ್ಧ್ ಕೂಡಾ ಅನಾಯಾಸವಾಗಿಯೇ ಸೇರ್ಪಡೆಗೊಳ್ಳುತ್ತಾರೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುವ ಪ್ರಸಿದ್ಧ್ ಅವರ ಪಾಲಿಗೆ ಆರಂಭದಿಂದಲೂ ಸಿನಿಮಾ ಅಂದರೆ ಅದೇನೋ ಆಸಕ್ತಿ. ಆದರೆ ಅಲ್ಲಿ ಇಂಥಾದ್ದೇ ಕೆಲಸ ಮಾಡಬೇಕೆಂಬ ಇರಾದೆಯೇನೂ ಇರಲಿಲ್ಲ. ಕರಾಟೆಪಟುವೂ ಆಗಿರೋ ಅವರು ಅದರಲ್ಲಿ ಬ್ಲಾಕ್ ಬೆಲ್ಟ್ ಹಂತವನ್ನೂ ತಲುಪಿಕೊಂಡಿದ್ದವರು. ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಕೂಡಾ ಹೌದು. ಅನೇಕರಿಗೆ ನೃತ್ಯ ಹೇಳಿಕೊಟ್ಟ ತೃಪ್ತಿಯೂ ಅವರಲ್ಲಿದೆ. ಸಾಫ್ಟ್ ವೇರ್ ವಲಯದಲ್ಲಿಯೂ ಅವರಿಗೆ ಗ್ರಾಫಿಕ್ಸ್, ಆನಿಮೇಷನ್ ವಿಭಾಗದ ಕೆಲಸವೇ ಸಿಕ್ಕಿತ್ತು. ಇದು ಅವರೊಳಗೆ ಸುಪ್ತವಾಗಿದ್ದ ಸಿನಿಮಾ ಕನಸನ್ನು ಮತ್ತಷ್ಟು ನಿಗಿ ನಿಗಿಸುವಂತೆ ಮಾಡಿದ್ದದ್ದು ಸುಳ್ಳಲ್ಲ.

ಹೀಗೆಯೇ ಒಳಗೊಳಗೆ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಅವರು ಕಡೆಗೂ ದೃಢ ನಿರ್ಧಾರ ಮಾಡಿ ಸ್ಟೋರಿ ರೈಟರ್ ಅವತಾರದಲ್ಲಿ ಚಿತ್ರರಂಗದ ಪಡಸಾಲೆಗೆ ಅಡಿಯಿರಿಸಿದ್ದರು. ಅದಾಗಲೇ ಸಾಕಷ್ಟು ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದ ಅವರು ಮೊದಲು ಕಥೆ ಹೇಳಿದ್ದು ನಾದಬ್ರಹ್ಮ ಹಂಸಲೇಖಾ ಅವರ ಮುಂದೆ. ಹಂಸಲೇಖಾ ಕೂಡಾ ಪ್ರಸಿದ್ಧ್ ಒಳಗಿರೋ ಕಥೆಯ ಕಸುವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಅವರೇ ಶಿವರಾಜ್ ಕುಮಾರ್ ಅವರಲ್ಲಿಗೂ ಕಳಿಸಿದ್ದರು. ಪ್ರಸಿದ್ಧ್ ಶಿವಣ್ಣನಿಗೂ ಕಥೆ ಹೇಳಿದ್ದರಾದರೂ ಕಾರಣಾಂತರಗಳಿಂದ ಆ ಕನಸು ಕೈಗೂಡಿರಲಿಲ್ಲ.

ಆ ನಂತರವೂ ಸಿನಿಮಾ ಮಾಡೋ ಗುಂಗಲ್ಲಿ ಅನೇಕರನ್ನು ಸಂಪರ್ಕಿಸಿದ್ದರಾದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಹೀಗೆಯೇ ನಿರಾಸೆಯಾದರೂ ಸೈರಿಸಿಕೊಂಡು ಮುಂದುವರೆಯುತ್ತಿದ್ದ ಪ್ರಸಿದ್ಧ ಅವರಿಗೆ ಕಡೆಗೂ ಸಿಕ್ಕಿದ್ದವರು ಎನ್ ಆರ್ ಐ ನಟರಾಜ್ ಹಳೆಬೀಡು. ಅವರೊಂದಿಗೆ ಸಿನಿಮಾ ಬಗ್ಗೆ ಚರ್ಚಿಸುತ್ತಾ ರತ್ನಮಂಜರಿ ಕಥೆ ಹುಟ್ಟಿಕೊಂಡಿತ್ತು. ತದನಂತರ ಡಾ. ನವೀನ್ ಮತ್ತು ಸಂದೀಪ್ ಕೂಡಾ ನಿರ್ಮಾಣಕ್ಕೆ ಜೊತೆಯಾಗೋ ಮೂಲಕ ಪ್ರಸಿದ್ಧ್ ಕನಸಿಗೆ ದೊಡ್ಡ ಮಟ್ಟದಲ್ಲಿಯೇ ಶುಭಾರಂಭ ದೊರೆತಿತ್ತು.

ಆ ನಂತರದಲ್ಲಿ ಛಾಯಾಗ್ರಾಹಕ ಪ್ರೀತಂ ತೆಗ್ಗಿನ ಮನೆ ಸೇರಿದಂತೆ ತಮ್ಮ ಕನಸಿಗೆ ಪೂರಕವಾದ ತಂತ್ರಜ್ಞರ ತಂಡವೇ ಪ್ರಸಿದ್ಧ್ ಅವರಿಗೆ ಸಿಕ್ಕಿತ್ತು. ನೋಡ ನೋಡುತ್ತಲೇ ಸಿನಿಮಾವನ್ನೇ ಉಸಿರಾಡೋ ಅಚ್ಚುಕಟ್ಟಾದೊಂದು ತಂಡವೂ ಸಾಥ್ ನೀಡಿತ್ತು. ಇದರಿಂದಾಗಿಯೇ ಯಾವ ಅಡೆತಡೆಯೂ ಇಲ್ಲದೇ ಈ ಚಿತ್ರ ಅಂದುಕೊಂಡಂತೆಯೇ ರೂಪುಗೊಂಡಿದೆಯಂತೆ. ಈ ಮೂಲಕ ಪ್ರಸಿದ್ಧ್ ಬಹುಕಾಲದ ಕನಸೊಂದು ಮೋಹಕವಾಗಿಯೇ ನನಸಾದ ಖುಷಿಯಲ್ಲಿದ್ದಾರೆ. ಕಥೆಯ ವಿಚಾರದಲ್ಲಿ, ತಾಂತ್ರಿಕವಾಗಿ ಹೊಸತನ ಹೊಂದಿರೋ ಈ ಚಿತ್ರ ಇದೇ ಮೇ ತಿಂಗಳಲ್ಲಿ ಅದ್ಧೂರಿಯಾಗಿಯೇ ಬಿಡುಗಡೆಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *