ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಚುನಾವಣಾ ತಂತ್ರಗಾರ, ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಮೂರು ವರ್ಷದ ಬಳಿಕ ಮಾತುಕತೆ ನಡೆಸಿದ್ದು ಮತ್ತೆ ಕಾಂಗ್ರೆಸ್ ಪರ ಪಿಕೆ ರಣತಂತ್ರ ರೂಪಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಬಿಹಾರ ಚುನಾವಣೆ ನಡೆದ ಒಂದು ತಿಂಗಳ ನಂತರ ಈ ಮಹತ್ವದ ಭೇಟಿ ನಡೆದಿದೆ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಟೀಕೆ ಮಾಡಿದ್ದ ಪ್ರಶಾಂತ್ ಕಿಶೋರ್ ಈಗ ಪ್ರಿಯಾಂಕಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದು ಯಾವ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನುವುದು ತಿಳಿದುಬಂದಿಲ್ಲ.
ಬಿಹಾರ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ರಾಹುಲ್ ಗಾಂಧಿಯವರ ಮತ ಕಳ್ಳತನ ಅಭಿಯಾನ ರಾಜ್ಯದ ಜನತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದರು.
ಹಾಗೆ ನೋಡಿದರೆ ಈ ಹಿಂದೆ ಪ್ರಶಾಂತ್ ಕಿಶೋರ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಆದರೆ ಇವರ ಸಲಹೆಗಳು ಕಾಂಗ್ರೆಸ್ ಹಿರಿಯ ನಾಯಕರಿಗೆ ಹಿಡಿಸದ ಕಾರಣ ಇವರ ವಿರುದ್ಧ ಮಾತುಗಳು ಕೇಳಿ ಬಂದಿತ್ತು. ಇದನ್ನೂ ಓದಿ: ಬೆಳಗ್ಗೆವರೆಗೆ ಪಟ್ಟ ಸಿಗುತ್ತೆ ಅನ್ನೋದು ಗೊತ್ತೇ ಇರಲಿಲ್ಲ – ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಯಾರು?
ಪ್ರಶಾಂತ್ ಅವರು ಪಕ್ಷದಲ್ಲಿ ಫ್ರೀ ಹ್ಯಾಂಡ್ ಕೇಳಿದ್ದರು. ಆದರೆ ಕಾಂಗ್ರೆಸ್ ಈ ಪ್ರಸ್ತಾಪವನ್ನು ಒಪ್ಪಿಕೊಂಡಿರಲಿಲ್ಲ. ಹೊರಗಿನಿಂದ ಬಂದ ವ್ಯಕ್ತಿಯ ಸೂಚನೆಯ ಮೇರೆಗೆ ಪಕ್ಷದ ರಚನೆಯನ್ನು ಬದಲಾಯಿಸುವುದಕ್ಕೆ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಪ್ರಶಾಂತ್ ಕಿಶೋರ್ ಬಹಿರಂಗವಾಗಿಯೇ ನಾನು ಕಾಂಗ್ರೆಸ್ ಪರ ಕೆಲಸ ಮಾಡುತ್ತಿಲ್ಲ ಎಂದಿದ್ದರು. ಕಾಂಗ್ರೆಸ್ ಚುನಾವಣೆಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ನಿರಾಕರಿಸಿದ್ದೇನೆ. ನನಗಿಂತ ಮುಖ್ಯವಾಗಿ ಪಕ್ಷದಲ್ಲಿ ನಾಯಕತ್ವ, ಸಾಮೂಹಿಕ ಇಚ್ಛಾ ಶಕ್ತಿಯ ಅಗ್ಯವಿದೆ ಎಂದು ಹೇಳಿದ್ದರು.
ಮೋದಿ ಕ್ಯಾಂಪ್ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್:
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ (Narendra Modi) ಕ್ಯಾಂಪ್ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು
ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಒಂದು ಚುನಾವಣೆಗೆ ಸಲಹೆ ನೀಡಲು 100 ಕೋಟಿ ಪಡೆಯುತ್ತೇನೆ: ಪ್ರಶಾಂತ್ ಕಿಶೋರ್

