ಸಿಲಿಕಾನ್ ಸಿಟಿಯಲ್ಲಿ ದೆವ್ವಗಳ ಕಾಟ – ಸಾರ್ವಜನಿಕರಿಂದ ದೂರು

Public TV
2 Min Read

ಬೆಂಗಳೂರು: ಬೆಂಗಳೂರಲ್ಲಿ ರಾತ್ರೋರಾತ್ರಿ ದೆವ್ವಗಳು ಕಾಣಿಸಲಾರಂಭಿಸಿದ್ದು, ಮಧ್ಯರಾತ್ರಿ ದೆವ್ವಗಳ ಹಾವಳಿಗೆ ನಗರದ ಜನತೆ ಭಯಭೀತರಾಗಿದ್ದು, ದಾರಿಯುದ್ದಕ್ಕೂ ಬೆನ್ನು ಹತ್ತುತ್ತಿವೆ.

ಜನರನ್ನು ಬೆದರಿಸಲು ಈ ದೆವ್ವಗಳ ಗ್ಯಾಂಗ್ ಹುಟ್ಟಿಕೊಂಡಿದ್ದು, ದೆವ್ವದ ರೀತಿ ಮುಖವಾಡ ಹಾಕಿಕೊಂಡು ರಾತ್ರಿ ಓಡಾಡುತಿತ್ತು. ಇವುಗಳ ಕಾಟದಿಂದ ಬೇಸತ್ತ ಜನ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೆವ್ವಗಳ ಬೆನ್ನು ಹತ್ತಿದ ಪೊಲೀಸರಿಗೆ ಶಾಕ್ ಆಗಿದ್ದು, ಈ ಮಾನವ ದೆವ್ವಗಳು ಸಿಕ್ಕಿಬಿದ್ದಿದ್ದು ಪೊಲೀಸರ ಅತಿಥಿಯಾಗಿವೆ.

ನಿಜವಾಗಿ ನಡೆದಿದ್ದು ಏನು?
ಯಶವಂತಪುರದಲ್ಲಿ ಕೆಲ ಯುವಕರು ಪ್ರಾಂಕ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಭಾನುವಾರ ತಡರಾತ್ರಿ ದೆವ್ವದ ರೀತಿ ಮುಖವಾಡ ಹಾಕಿ ಈ ಯುವಕರು ಜನರನ್ನು ಹೆದರಿಸುತ್ತಿದ್ದರು. ಇದರಿಂದ ಭಯಭೀತರಾದ ಜನ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದು, ಪ್ರಾಂಕ್ ವೀಡಿಯೊ ಮಾಡಿ ಯು ಟ್ಯೂಬ್, ಟಿಕ್ ಟಾಕ್‍ಗೆ ಅಪ್ ಲೋಡ್ ಮಾಡುವ ಪ್ಲಾನ್ ಹೊಂದಿದ್ದರು ಎಂದು ತಿಳಿದು ಬಂದಿದೆ.

ಯಶವಂತಪುರದ ಶರೀಫ್ ನಗರದಲ್ಲಿ ಕೆಲ ಹುಡುಗರು ದೆವ್ವದ ವೇಷ ಹಾಕಿ ಹೆದರಿಸುತ್ತಿದ್ದಾರೆ ಎಂದು ನಿನ್ನೆ ರಾತ್ರಿ 2-30ರ ಸುಮಾರಿಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಮ್ಮ ಕ್ರೈಂ ಸಿಬ್ಬಂದಿ ಹೋದಾಗ ಪ್ರಾಂಕ್ ಮಾಡುತ್ತಿದ್ದರು. ಆಟೋದವರನ್ನು ಮತ್ತು ದ್ವಿಚಕ್ರ ವಾಹನ ಸವಾರರನ್ನು ಅಡ್ಡ ಹಾಕಿ ಹೆದರಿಸುತ್ತಿದ್ದರು. ದೆವ್ವದ ವೇಷ ಹಾಕಿದ್ದರಿಂದ ಜನ ಹೆದರುತ್ತಿದ್ದರು. ಅಲ್ಲದೆ ಒಬ್ಬ ಸತ್ತಂತೆ ನಟಿಸುತ್ತಿದ್ದ. ನಮ್ಮ ಕ್ರೈಂ ಸಿಬ್ಬಂದಿಯನ್ನು ಹೆದರಿಸುವ ಪ್ರಯತ್ನ ಮಾಡಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

ನಿನ್ನೆ ತುಂಬಾ ಸೂಕ್ಷ್ಮ ದಿನವಾಗಿತ್ತು. ಈದ್ ಮಿಲಾದ್ ಇತ್ತು, ಟಿಪ್ಪು ಜಯಂತಿ, ಅಲ್ಲದೆ ಅಯೋಧ್ಯೆ ತೀರ್ಪು ಬೇರೆ ಬಂದಿತ್ತು. ಇಂತಹ ಸಂದರ್ಭಲ್ಲಿ ಮಧ್ಯರಾತ್ರಿ ಪ್ರಾಂಕ್ ಮಾಡುವುದು ಸರಿಯಲ್ಲ. ಸಡನ್ ಆಗಿ ದೆವ್ವದ ರೀತಿ ಅಡ್ಡ ಬಂದರೆ ಮೃದು ಹೃದಯ ಹೊಂದಿದವರಿಗೆ ಏನಾದರೂ ಅಪಾಯ ಆಗಬಹುದು. ಇದಕ್ಕಾಗಿ ಅನುಮತಿ ತೆಗೆದುಕೊಂಡು ಮಾಡಬಹುದಿತ್ತು. ಆದರೆ ಯುವಕರು ಯಾವುದೇ ಅನುಮತಿ ಪಡೆದಿರಲಿಲ್ಲ ಎಂದರು.

ಏಳು ಜನರನ್ನು ಬಂಧನಕ್ಕೆ ಒಳಪಡಿಸಿ ವಿಚಾರಣೆ ಒಳಪಡಿಸಿದಾಗ ಅವರೆಲ್ಲ ವಿದ್ಯಾರ್ಥಿಗಳಾಗಿದ್ದು ನಗರದ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕೊಟ್ಟು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *