4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್

Public TV
2 Min Read

– ಗ್ರಾಮಸ್ಥರು ತಮ್ಮ ಬಳಿ ಇರುವ ಗಿಫ್ಟ್ ದಾಖಲೆಯನ್ನ ಅರಮನೆ ಕಚೇರಿಗೆ ತಲುಪಿಸಲಿ

ಮೈಸೂರು: ಚಾಮರಾಜನಗರದಲ್ಲಿ (Chamarajanagara) 4,500 ಎಕರೆ ಜಮೀನು ಅರಮನೆಗೆ ಸೇರಿದ್ದು ಎಂಬುದಕ್ಕೆ ದಾಖಲೆ ಇದೆ. ಆದ್ರೆ ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಅರಮನೆ ಹೆಸರಿಗೇ ಜಮೀನು ಬಂದರೂ ನಾವು ಅದನ್ನು ಅವರಿಗೇ ಬಿಟ್ಟು ಕೊಡುವ ವ್ಯವಸ್ಥೆ ಮಾಡ್ತಿವಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ (Pramoda Devi Wadiyar) ಹೇಳಿದ್ದಾರೆ.

CNG PRAMODA DEVI LETTER AV 1

ರಾಜಮನೆತನಕ್ಕೆ (Royal family) ಸೇರಿದ 4,500 ಎಕರೆ ಜಾಗವನ್ನು ರಿಜಿಸ್ಟರ್‌ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಪತ್ರ ಬರೆದಿದ್ದರು. ಈ ವಿಚಾರವಾಗಿ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್‌ ಮಾಡಿಕೊಡಬೇಡಿ ಎಂದು ಡಿಸಿಗೆ ಮನವಿ ಮಾಡಿದ್ದರು. ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದಾದೇವಿ ಒಡೆಯರ್‌ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.

ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿಗೆ 2014 ರಲ್ಲೇ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಡಿಸಿಗೆ ಮಾಹಿತಿ ಇಲ್ಲದೇ ಇರಬಹುದು. ಆದ್ರೆ 1951 ರಲ್ಲಿ ಸರ್ಕಾರದ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್ ಅವರ ಸಹಿ ಇರುವ ಪತ್ರದಲ್ಲಿ ನಮ್ಮ ಆಸ್ತಿ ಪಟ್ಟಿಯಲ್ಲಿ 4,500 ಎಕ್ರೆಯೂ ಇದೆ. ಅರಮನೆ ಹೆಸರಿಗೆ ಜಮೀನು ಬಂದರೂ ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಗ್ರಾಮಸ್ಥರೊಂದಿಗೆ ಮಾತನಾಡಿ ನಾವು ಅದನ್ನು ಅವರಿಗೇ ಬಿಟ್ಟು ಕೊಡುವ ವ್ಯವಸ್ಥೆ ಮಾಡ್ತಿವಿ ಎಂದು ಹೇಳಿದ್ದಾರೆ.

pramoda devi wadiyar

ಆ ಕಾಲದಲ್ಲಿ ಮಹಾರಾಜರು ಜಮೀನು ಗಿಫ್ಟ್ ಕೊಟ್ಟಿದ್ದಾರೆ. ಖಂಡಿತವಾಗಿಯೂ ಅವರನ್ನು ಒಕ್ಕಲೆಬಿಸುವ ಕೆಲಸ ಮಾಡಲ್ಲ. ಗ್ರಾಮಸ್ಥರು ತಮ್ಮ ಬಳಿ ಇರುವ ಗಿಫ್ಟ್ ದಾಖಲೆಯನ್ನು ಅರಮನೆ ಕಚೇರಿಗೆ ತಲುಪಿಸಲಿ. ಈ ವಿಚಾರದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಮಾತನಾಡಲು ಪ್ರಯತ್ನ ಪಟ್ಟೆ. ದೂರವಾಣಿ ಕರೆ ಮಾಡಿದ್ದೆ ಸ್ವೀಕರಿಸಿಲ್ಲ. ಮೇಸೇಜ್‌ಗೂ ರೀಪ್ಲೆ ಮಾಡಿಲ್ಲ. ಗ್ರಾಮಸ್ಥರು ಯಾವುದೇ ಸಂದರ್ಭದಲ್ಲಾದರೂ ಅರಮನೆ ಕಚೇರಿಗೆ ಗಿಫ್ಟ್ ಕೊಟ್ಟಿರುವ ದಾಖಲೆ ಇದ್ದರೆ ಖಂಡಿತ ಕೊಡಿ. ಗ್ರಾಮಸ್ಥರ ಬಳಿ ಗಿಫ್ಟ್ ಕೊಟ್ಟ ದಾಖಲೆ ಇಲ್ಲದಿದ್ದರೂ ಅವರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದ್ದಾರೆ.

ಇನ್ನೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. ರಾತ್ರಿ ಸಂಚಾರದ ಅವಶ್ಯಕತೆ ಇಲ್ಲ. ಪ್ರಾಣಿಗಳ ದೃಷ್ಟಿಯಿಂದ ರಾತ್ರಿ ಸಂಚಾರ ಬೇಡ. ಸಂಚಾರಕ್ಕೆ- ಈಗ ಇರುವಷ್ಟು ಅವಧಿಯೇ ಸಾಕು ಎಂದು ಹೇಳಿದ್ದಾರೆ.

Share This Article