ವಲಸೆ ಕಾರ್ಮಿಕರ ಅನುಕೂಲಕ್ಕಾಗಿ 7 ಕಡೆ ವಸತಿ ರಹಿತರ ಆಶ್ರಯ ಕೇಂದ್ರ ನಿರ್ಮಾಣ: ಪ್ರಹ್ಲಾದ್ ಜೋಶಿ

Public TV
1 Min Read

ಹುಬ್ಬಳ್ಳಿ: ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಅವಳಿ ನಗರದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಅಡಿ 7 ನಗರ ವಸತಿ ರಹಿತರ ಆಶ್ರಯ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ಹೊಸೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರವನ್ನು ಇಂದು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಉಂಟಾದ ವಲಸೆ ಕಾರ್ಮಿಕ ಸಮಸ್ಯೆಯನ್ನು ನಿವಾರಿಸಲು ಆಶ್ರಯ ಕೇಂದ್ರಗಳು ಅನುಕೂಲವಾಗಲಿವೆ. ಆಶ್ರಯ ಕೇಂದ್ರದಲ್ಲಿ ಗರಿಷ್ಠ 6 ತಿಂಗಳವರೆಗೆ ವಲಸೆ ಕಾರ್ಮಿಕರಿಗೆ ಊಟದೊಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

ನಗರದಲ್ಲಿ ಕೈಗೊಳ್ಳಲಾದ ಸಮೀಕ್ಷೆಯಲ್ಲಿ ಕಾರ್ಮಿಕರು ಆಶ್ರಯ ಕೇಂದ್ರದಲ್ಲಿ ಉಳಿದುಕೊಳ್ಳಲು ಒಲವು ತೋರಿಸಿದ್ದಾರೆ. ಈಗ ಉದ್ಘಾಟಿಸಿದ ಆಶ್ರಯ ಕೇಂದ್ರ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಈ ಕೇಂದ್ರದಲ್ಲಿ ಒಬ್ಬ ವ್ಯವಸ್ಥಾಪಕರು, 3 ಜನ ಆರೈಕೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವರು. ಇದು 23 ಜನ ಪುರುಷರು ಹಾಗೂ ಮಹಿಳೆಯರಿಗೆ ಆಶ್ರಯ ನೀಡಲಾಗುವುದು ಎಂದರು. ಇದನ್ನೂ ಓದಿ: ಹೆಚ್ಚಾದ ಭೀಮಾ ನದಿ ಒಳಹರಿವು – ಯಾದಗಿರಿ ವೀರಾಂಜನೇಯ, ಕಂಗಳೇಶ್ವರ ದೇಗುಲ ಜಲಾವೃತ

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಜಿಲ್ಲಾ ಕೌಶ್ಯಲ್ಯ ಅಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ, ಅಬ್ದುಲ್ ರಜಾಕ್ ಗಡವಾಲೆ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *