– ದಶಕಗಳ ಪ್ರಗತಿಗೆ ಮಾರಕ ನಡೆ
ನವದೆಹಲಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ (Election) ಇವಿಎಂ (EVM) ಬಿಟ್ಟು ಮತಪತ್ರಕ್ಕೆ (Ballot Paper) ಮಣೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ʻಡಿಜಿಟಲೀಕರಣ ಮತ್ತು ಪಾರದರ್ಶಕತೆʼ ವಿರುದ್ಧ ಹೆಜ್ಜೆಯಿಟ್ಟಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಟೀಕಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗೆ ಇವಿಎಂ ಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ಗಳನ್ನೇ ಬಳಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ಆಕ್ಷೇಪಿಸಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಧಿಕಾರ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲುವ ಹುನ್ನಾರ, ಬ್ಯಾಲೆಟ್ ವಿರೋಧಿಸುತ್ತೇವೆ: ಅಶ್ವಥ್ ನಾರಾಯಣ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಹಿಂದಿನ ಕಾಲದ ಪದ್ಧತಿಯಂತೆ ಮತಪತ್ರವನ್ನೇ ಮರಳಿ ತರಲು ಹೊರಟಿರುವ ಕ್ರಮ ಪ್ರಗತಿ ವಿರುದ್ಧದ ಅತಿದೊಡ್ಡ ಹಿಮ್ಮುಖ ಹೆಜ್ಜೆಯಾಗಿದೆ. ಭಾರತದ ತಂತ್ರಜ್ಞಾನ ರಾಜಧಾನಿ ಆಗಿರುವ ಕರ್ನಾಟಕವೇ ಇದೀಗ ತಂತ್ರಜ್ಞಾನವನ್ನು ತ್ಯಜಿಸುತ್ತಿರುವುದು ವಿಪರ್ಯಾಸ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆ ರಾಷ್ಟ್ರದ ದಶಕಗಳ ಪ್ರಗತಿಯನ್ನು ಹಾಳು ಮಾಡುವ ಉದ್ದೇಶದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತದಾನಕ್ಕೆ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಹಿಂತಿರುಗುವುದರಿಂದ ಮತ್ತದೇ ಹಳೆಯ ಸಮಸ್ಯೆಗಳನ್ನು ತಂದೊಡ್ಡಲಿದೆ. ಹೆಚ್ಚಿನ ಅಮಾನ್ಯ ಮತಗಳು, ಮತಗಟ್ಟೆಗಳ ವಶ, ಮತ ಪ್ರಕ್ರಿಯೆಗಳಲ್ಲಿ ವಿಳಂಬ ಮತ್ತು ಬೃಹತ್ ವೆಚ್ಚದಾಯಕವಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಪರಿಸರ ಮಾರಕ ಕ್ರಮಕ್ಕೆ ಕೈ ಹಾಕಿದೆ ಎಂದು ಖಂಡಿಸಿದ್ದಾರೆ.
ಭಾರತದ ಇವಿಎಂ ಕ್ರಾಂತಿಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. 1980ರ ದಶಕದಲ್ಲಿ ಇವಿಎಂಗಳನ್ನು ಪ್ರಾಯೋಗಿಕವಾಗಿ ಬಳಸಿದ ಮೊದಲ ನಗರಗಳ ಪೈಕಿ ಬೆಂಗಳೂರು ಒಂದು. 1990ರ ದಶಕದಲ್ಲಿ ರಾಜ್ಯದಲ್ಲಿ ಇವಿಎಂ ಅಳವಡಿಸಿಕೊಳ್ಳಲು ಪ್ರಮುಖ ಕಾರಣವಾಯಿತು. ಈಗ ನೋಡಿದರೆ ಕಾಂಗ್ರೆಸ್ ಸರ್ಕಾರ ಅದೆಲ್ಲಾ ಸಾಧನೆಯ ಗರಿಗೆ ಕೊಳ್ಳಿ ಇಡುತ್ತಿರುವಂತೆ ಕಾಣುತ್ತಿದೆ.
VVPAT ಹೊಂದಿರುವ ಇವಿಎಂಗಳು ಭಾರತದ ಚುನಾವಣಾ ಪ್ರಕ್ರಿಯೆಯ ಬೆನ್ನೆಲುಬಾಗಿ ನಿಂತಿದೆ. ತ್ವರಿತ ಮತದಾನ, ವೇಗದ ಮತ ಎಣಿಕೆ ಪ್ರಕ್ರಿಯೆ, ಕನಿಷ್ಠ ಅಮಾನ್ಯ ಮತಕ್ಕೆ ನಾಂದಿ ಹಾಡಿದೆ ಮತ್ತು ಮತಗಟ್ಟೆ ವಶಪಡಿಸಿಕೊಳ್ಳುವ ಆಟದಿಂದ ರಕ್ಷಿಸಿದೆ. ಆದರೆ, ಕಾಂಗ್ರೆಸ್ ಸರ್ಕಾರ ಇದೆಲ್ಲವನ್ನೂ ಮರೆಮಾಚಿ ಮತ್ತದೇ ಆಟವಾಡಲು ಹೊರಟಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: FPD ಸಮಗ್ರ ಕ್ಷೇತ್ರಮಟ್ಟದ ಮೌಲ್ಯಮಾಪನ ವರದಿ ಪ್ರಹ್ಲಾದ್ ಜೋಶಿಗೆ ಸಲ್ಲಿಕೆ