ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತೆ: ಪ್ರಹ್ಲಾದ್ ಜೋಶಿ

Public TV
2 Min Read

ಬೆಳಗಾವಿ: ಸರ್ಕಾರ ಸಂಪೂರ್ಣ ವೆಚ್ಚ ಭರಿಸಿ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ಸಮೀಪದ ಏರ್‌ಪೋರ್ಟ್‍ಗೆ ಕರೆದುಕೊಂಡು ಬರುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್ ಅಕ್ಕಪಕ್ಕದ ದೇಶಗಳ ಜೊತೆ ಮಾತುಕತೆ ಮಾಡಲಾಗುತ್ತಿದೆ. ಅವರ ಸಹಯೋಗ ಸಹಕಾರ ಪಡೆದು ಕೆಲಸ ಮಾಡುತ್ತಿದ್ದೇವೆ. ದೆಹಲಿ, ಮುಂಬೈ ಯಾವುದಾದರೂ ಪ್ರಮುಖ ನಗರ ಆಯ್ಕೆ ಮಾಡಿ ಭಾರತ ಸರ್ಕಾರ ಸಂಪೂರ್ಣ ಮುಕ್ತವಾಗಿ ಕರೆದುಕೊಂಡು ಬರುತ್ತಿದೆ ಎಂದರು.

ಉಕ್ರೇನ್‍ನಲ್ಲಿ ಈಗಿನ ವಾಸ್ತವಿಕ ಚಿತ್ರಣ, ಅಲ್ಲಿಂದ ಬರುವ ವೀಡಿಯೋಗಳು ಎಲ್ಲಾ ಸತ್ಯವೋ ಸುಳ್ಳೋ ಎನ್ನುವುದು ಪರಿಶೀಲನೆ ಆಗುತ್ತಿಲ್ಲ. ಸದ್ಯ ಪ್ರಧಾನಿ ಮಾರ್ಗದರ್ಶನ ನೇತೃತ್ವದಲ್ಲಿ ಟಾಪ್ ಪ್ರಿಯಾರಿಟಿಯಿಂದ ನಾವು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ ಎಂದು ಹೇಳಿದರು.

ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಿನ್ನೆ ಮೂರು ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ನಮ್ಮ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಇದು ಅತ್ಯಂತ ಕಠಿಣ ಕ್ಲಿಷ್ಟಕರ ಸನ್ನಿವೇಶವಾಗಿದೆ. ಉಕ್ರೇನ್ ಜೊತೆಯೂ ನಮ್ಮ ಮಾತುಕತೆ ನಡೆಯುತ್ತಿದೆ. ನಾನು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ವಿದೇಶಾಂಗ ರಾಜ್ಯ ಸಚಿವರ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕ್ಲಿಷ್ಟಕರ ಸನ್ನಿವೇಶ ಇರುವುದರಿಂದ ರಷ್ಯಾದ ಜೊತೆಯೂ ಮಾತನಾಡಬೇಕಾಗುತ್ತದೆ. ಉಕ್ರೇನ್ ಜೊತೆಯೂ ಮಾತನಾಡಬೇಕಾಗುತ್ತದೆ. ನಮ್ಮ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಆದ್ಯತೆ. ಇದು ಬಹುದೊಡ್ಡ ಚಾಲೆಂಜ್ ಎಂದರು.

ಹಿಂದೆ ಇರಾಕ್ ಅಫ್ಘಾನಿಸ್ತಾನದಲ್ಲಿ ಸಮಸ್ಯೆಯಾದ ಸಂದರ್ಭದಲ್ಲಿ ಯಶಸ್ವಿಯಾಗಿ ಸ್ಥಳಾಂತರ ಮಾಡಿದ್ದೇವು. ಆದರೆ ಉಕ್ರೇನ್‍ನಲ್ಲಿ ನಿರೀಕ್ಷೆಗಿಂತ ಬೇಗ ಯುದ್ಧ ಶುರುವಾಗಿರುವುದರಿಂದ ಸಮಸ್ಯೆ ಆಗಿದೆ. ಭೌಗೋಳಿಕವಾಗಿ ಉಕ್ರೇನ್ ಬಹಳ ವಿಶಾಲವಾಗಿದೆ. ಇಂದೂ ಸಹ ವಿಮಾನಗಳು ಭಾರತಕ್ಕೆ ಬರುತ್ತಿವೆ. ಕೇಂದ್ರ ಸರ್ಕಾರ ಅತ್ಯಂತ ಸಂವೇದನಾಶೀಲವಾಗಿ ಪ್ರಯತ್ನ ಮಾಡ್ತಿದ್ದೇವೆ. ಕಷ್ಟ ಇದೆ ನಾವು ಏನು ಆಗೇ ಇಲ್ಲ ಅಂತಾ ಹೇಳುತ್ತಿಲ್ಲ. ಆದರೆ ಸುರಕ್ಷಿತವಾಗಿ ಮಕ್ಕಳನ್ನು ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಉಕ್ರೇನ್‍ನ ಕೀವ್, ಖಾರ್ಕೀವ್‍ನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಪರದಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೀವ್ ಮತ್ತು ಖಾರ್ಕೀವ್‍ಗೆ ರೆಸ್ಕ್ಯೂಗೆ ರೀಚ್ ಆಗೋಕೆ ಆಗುತ್ತಿಲ್ಲ. ಉಕ್ರೇನ್ ಭಾರತೀಯ ರಾಯಭಾರಿ ಕಚೇರಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಹೆಚ್ಚಿನ ಫೋನ್‍ಗಳ ವ್ಯವಸ್ಥೆ ಮಾಡಿದ್ದೇವೆ. ಕೆಲವೊಂದು ವೇಳೆ ಎಲೆಕ್ಟ್ರಿಸಿಟಿ ಸೇರಿ ಇತರ ಸೌಲಭ್ಯ ಸಿಗಲ್ಲ. ನನಗೆ ಬಂದ ಫೋನ್‍ಗಳನ್ನು ಸ್ವೀಕರಿಸುತ್ತಿದ್ದೇನೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆ ತರುವುದು ನಮ್ಮ ಆದ್ಯತೆ ಎಂದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

ಬಾಂಬ್ ದಾಳಿ, ಶೆಲ್ಲಿಂಗ್ ಆಗುತ್ತಿದೆ. ಎರಡೂ ಕಡೆ ಸೈನಿಕರು ಸುತ್ತವರೆದಿದ್ದಾರೆ. ಹೀಗಾಗಿ ರೀಚ್ ಆಗಲು ಆಗುತ್ತಿಲ್ಲ. ನಾವು ಅಲ್ಲಿ ರೀಚ್ ಆಗಲು ಆಗುತ್ತಿಲ್ಲ, ಇದು ಬಹಳ ಕಷ್ಟಕರ ಪರಿಸ್ಥಿತಿಯಾಗಿದೆ. ಕೆಲವು ಪೋಷಕರು ನನಗೂ ಫೋನ್ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ನಿನ್ನೆಯಿಂದ ನ್ಯೂಕ್ಲಿಯರ್ ಮಾತುಕತೆ ನಡೆಯುತ್ತಿದೆ. ಇದರಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ನನಗೆ ಗೊತ್ತಿಲ್ಲ. ಇದು ನಮಗೆ ಚಾಲೇಂಜಿಂಗ್ ಟೈಮ್. ನಮ್ಮ ನಾಗರಿಕರನ್ನು ಹೇಗಾದರೂ ಮಾಡಿ ಸುರಕ್ಷಿತವಾಗಿ ಕರೆತರೋದೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಸ್ವತಃ ಪ್ರಧಾನಿ ಡೇ ಟು ಡೇ ಮಾನಿಟರ್ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

Share This Article
Leave a Comment

Leave a Reply

Your email address will not be published. Required fields are marked *