ಹಿರಿಯ ನಟರೊಬ್ಬರ ಜೀವ ಕಾಪಾಡಿದ ಪ್ರಕಾಶ್ ರಾಜ್

Public TV
2 Min Read

ಹೈದರಾಬಾದ್: ಪಂಚ ಭಾಷಾ ನಟ ಪ್ರಕಾಶ್ ರಾಜ್ ತಮ್ಮ ಅದ್ಭುತವಾದ ಅಭಿನಯ ಮಾತ್ರವಲ್ಲ ಸಾಮಾಜಿಕ ಕಳಕಳಿ, ಬರವಣಿಗೆ, ಮಾತುಗಾರಿಕೆಯಿಂದಲೂ ಖ್ಯಾತಿ ಗಳಿಸಿದವರು. ಆದರೆ ಇತ್ತೀಚೆಗೆ ಅವರು ಮಾಡಿದ ಸಹಾಯದಿಂದ ಒಬ್ಬರು ಹಿರಿಯ ನಟರ ಜೀವ ಉಳಿದಿದೆ.

ಕೇವಲ ಚಿತ್ರರಂಗ ಮಾತ್ರವಲ್ಲದೇ ರಾಜಕೀಯದಲ್ಲೂ ಆಸಕ್ತಿಯುಳ್ಳ ಪ್ರಕಾಶ್ ರಾಜ್ ಚುನಾವಣೆಗೂ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲದೆ ಕಲಾವಿದರ ಅಭಿವೃದ್ಧಿ, ಭದ್ರತೆ ಕುರಿತು ಕೂಡ ಪ್ರಕಾಶ್ ರಾಜ್ ಅವರಿಗೆ ಕಾಳಜಿ ಹೆಚ್ಚಾಗಿದ್ದು, ಇದೇ ಕಾಳಜಿಯಿಂದ ಇಂದು ಹಿರಿಯ ನಟರೊಬ್ಬರ ಜೀವ ಉಳಿದಿದೆ. ಈ ಬಗ್ಗೆ ತೆಲುಗು ನಟ ರಾಜ ರವೀಂದ್ರ ಅವರು ಪ್ರಕಾಶ್ ರಾಜ್ ಅವರ ಒಳ್ಳೆತನದ ಬಗ್ಗೆ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಆತ್ಮಹತ್ಯೆ ನಿರ್ಣಯ ಮಾಡಿದ್ದ ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರ ಜೀವವನ್ನ ಪ್ರಕಾಶ್ ರಾಜ್ ಹೇಗೆ ಉಳಿಸಿದರು ಅನ್ನೋದನ್ನ ರಾಜ ರವೀಂದ್ರ ವಿವರಿಸಿದ್ದಾರೆ. ಹಿರಿಯ ನಟ ಸುಮಾರು 50 ಲಕ್ಷ ಸಾಲ ಮಾಡಿಕೊಡ್ಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಆದರೆ ಈ ವಿಷಯ ತಿಳಿದ ಪ್ರಕಾಶ್ ರಾಜ್ ಅವರು ಅವರಿಗೆ ಹಣ ಸಹಾಯ ಮಾಡಿ ನೆರವಾಗಿದ್ದಾರೆ. ಒಂದು ಜೀವ ಉಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹಿರಿಯ ನಟನ ಕಷ್ಟದ ಬಗ್ಗೆ ತಿಳಿದ ತಕ್ಷಣ ಪ್ರಕಾಶ್ ಅವರು ನನಗೆ ಕರೆ ಮಾಡಿ, ಆ ಹಿರಿಯ ನಟರನ್ನು ಕರೆತರುವಂತೆ ಹೇಳಿದರು. ಪ್ರಕಾಶ್ ಅವರ ಬಳಿ ಹಿರಿಯ ನಟರನ್ನು ಕರೆದುಕೊಂಡು ಹೋದಾಗ ಕಷ್ಟವನ್ನೆಲ್ಲಾ ಕೇಳಿ ಅವರಿಗೆ 50 ಲಕ್ಷ ರೂ. ಹಣ ಸಹಾಯ ಮಾಡಿದರು. ಜೊತೆಗೆ ಅವರಿಗೆ ಧೈರ್ಯ ತುಂಬಿ ನಿಮ್ಮ ಕಷ್ಟಕ್ಕೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿ ಕಳುಹಿಸಿದರು ಎಂದು ರಾಜ ರವೀಂದ್ರ ಅವರು ಹೇಳಿದ್ದಾರೆ.

ಪ್ರಕಾಶ್ ರಾಜ್ ಅವರು ನೀಡಿದ ಹಣದಿಂದ ತಮ್ಮ ಸಾಲವನ್ನು ತೀರಿಸಿಕೊಂಡ ಹಿರಿಯ ನಟ ಈಗ ಆರಾಮಾಗಿದ್ದಾರೆ. ಆದರೆ ಇಷ್ಟು ದಿನವಾದರೂ ಕೊಟ್ಟ ಹಣವನ್ನು ಮಾತ್ರ ಪ್ರಕಾಶ್ ಅವರು ಹಿಂಪಡೆದಿಲ್ಲ ಎಂದು ರಾಜ ರವೀಂದ್ರ ಅವರು ಹೇಳಿದರು. ಪ್ರಕಾಶ್ ರಾಜ್ ತಮ್ಮ ಸಿಟ್ಟಿನ ವರ್ತನೆಯಿಂದ ಕೆಲ ಬಾರಿ ತೆಲುಗು ಸಿನಿರಂಗದಿಂದ ಬಹಿಷ್ಕಾರ ಅನುಭವಿಸಿದ್ದಾರೆ. ಆದರೆ ಆ ಸಿಟ್ಟಿನ ಸ್ವಭಾವದ ಮನಸ್ಸಿನಲ್ಲೂ ಪ್ರೀತಿ, ಇತರರಿಗೆ ಸಹಾಯ ಮಾಡುವ ಗುಣ ಇರೋದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.

Share This Article
Leave a Comment

Leave a Reply

Your email address will not be published. Required fields are marked *