ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್

Public TV
2 Min Read

ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಆಪ್ತರಾಗಿದ್ದ ಬಹುಭಾಷಾ ನಟ ಪ್ರಕಾಶ್ ರೈ ಸಹ ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡುತ್ತಿದ್ದು, ಅಪ್ಪು ಎಕ್ಸ್‌ಪ್ರೆಸ್ (Appu Express) ಹೆಸರಿನ ಅಂಬುಲೆನ್ಸ್ (Ambulence) ವಾಹನಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಅವರು ಕಾಲಿವುಡ್ ನಟ ಸೂರ್ಯ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಸಹಾಯ ಪಡೆದಿದ್ದರು. ಈ ಹಿಂದೆ `ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ (Prakashraj) ಅವರ ಕಾರ್ಯದಲ್ಲಿ ಯಶ್ (Yash)ಕೈ ಜೋಡಿಸುವುದಾಗಿ ಹೇಳಿದ್ದರು. ನಮ್ಮ ರಾಜ್ಯದ ಪ್ರತಿ ಜಿಲ್ಲೆಗೂ ಒಂದೊಂದು ಅಂಬುಲೆನ್ಸ್ ತಲುಪಿಸೋಣ ಎಂದಿದ್ದರು. ಇದೀಗ ಕೊಟ್ಟ ಮಾತ್ನ ಈಡೇರಿಸಿದ್ದಾರೆ.

ಇದೀಗ 5 ಜಿಲ್ಲೆಗಳಿಗೆ ಅಪ್ಪು ಅಂಬುಲೆನ್ಸ್ ಅನ್ನು ಪ್ರಕಾಶ್ ರೈ ಅವರು ಉಚಿತವಾಗಿ ನೀಡಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಹಾಯ ಮಾಡಿದ ನಟ ಯಶ್, ಸೂರ್ಯ (Suriya) ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರುಗಳಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್ ಅಪ್ಪು ನಮ್ಮೆಲ್ಲರೊಟ್ಟಿಗೆ ಶಾಶ್ವತವಾಗಿ ಉಳಿಯಬೇಕೆಂದರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರೆಸಬೇಕಾಗಿದೆ. ಹಾಗಾಗಿ ನಾನು ನನ್ನ `ಪ್ರಕಾಶ್ ರಾಜ್’ ಫೌಂಡೇಶನ್ ಮೂಲಕ ಅಪ್ಪು ಎಕ್ಸ್‌ಪ್ರೆಸ್ ಕನಸು ಕಂಡೆ. ಪ್ರತಿಜಿಲ್ಲೆಗೂ ಅಪ್ಪು ಎಕ್ಸ್‌ಪ್ರೆಸ್ ಅಂಬುಲೆನ್ಸ್ ಸೇವೆ ನೀಡುವ ಕಾರ್ಯವನ್ನು ನಾವು ಮೈಸೂರಿನಿಂದ ಆರಂಭಿಸಿದೆವು. ಇದೀಗ ಅದರ ಎರಡನೇ ಹಂತವಾಗಿ ಬೀದರ್, ಕಲಬುರ್ಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗಳಿಗೆ ಆಂಬುಲೆನ್ಸ್ ವಿತರಿಸುತ್ತಿದ್ದೇವೆ ಎಂದಿದ್ದಾರೆ.

ಆದರೆ ಈ ಬಾರಿ ನನ್ನ ಜೊತೆ ನಮ್ಮೊಂದಿಗೆ ಚಿರಂಜೀವಿ, ನಟ ಸೂರ್ಯ, ನಟ ಯಶ್ ಹಾಗೂ ಕೆವಿಎನ್ ನಿರ್ಮಾಣ ಸಂಸ್ಥೆಯ ನಿರ್ಮಾಪಕರಾದ ವೆಂಕಟ್ ಅವರುಗಳು ಇದ್ದಾರೆ. ಯಶ್ ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಸರ್, ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು ಎಂದಿದ್ದರು. ಅವರ ಉದಾರತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ, ಪ್ರತಿ ಜಿಲ್ಲೆಗೂ ಅಂಬುಲೆನ್ಸ್ ತಲುಪಿಸುತ್ತೇವೆ ಎಂದು ಯಶ್ ಹೇಳಿದ್ದ ವಿಡಿಯೋ ಹಂಚಿಕೊಂಡು ಆಂಬುಲೆನ್ಸ್ ಬಂತಾ ಎಂದು ಕೆಲವರು ಕಾಲೆಳೆದಿದ್ದರು. ಇದೀಗ ಕೊಟ್ಟ ಮಾತಿನಂತೆ ನಟರು ನಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *