ಲೋಕಸಭಾ ಚುನಾವಣೆಗೆ ಕ್ಷೇತ್ರ ಆಯ್ದುಕೊಂಡ ಪ್ರಕಾಶ್ ರೈ

Public TV
2 Min Read

ಬೆಂಗಳೂರು: ನಟ ಪ್ರಕಾಶ್ ರೈ ಹೊಸ ವರ್ಷದಂದು ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಆದ್ರೆ ಯಾವ ಕ್ಷೇತ್ರ, ಯಾವ ಪಕ್ಷ ಎಂಬುದರ ಮಾಹಿತಿಯನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

2019ರ ಲೋಕಸಭಾ ಚುನಾವಣೆಗಾಗಿ ನನ್ನ ರಾಜಕೀಯ ಜೀವನವನ್ನು ಕರ್ನಾಟಕದ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಆರಂಭಿಸಲು ನಿಶ್ಚಯಿಸಿದ್ದೇನೆ. ನನ್ನ ಹೊಸ ಜರ್ನಿಗೆ ಶುಭಕೋರಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಶೀಘ್ರದಲ್ಲಿಯೇ ಚುನಾವಣೆ ತಯಾರಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕ ಪ್ರಕಾಶ್ ರೈ ಎಡಪಂಥೀಯರಲ್ಲಿ ಗುರುತಿಸಿಕೊಂಡಿದ್ದಾರೆ. ಜಸ್ಟ್ ಆಸ್ಕಿಂಗ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ತಮ್ಮ ಆಪ್ತರ ಬಳಿಯೇ ಚರ್ಚಿಸಿಯೇ ಹೊಸ ವರ್ಷದಂದು ತಮ್ಮ ಅಭಿಮಾನಿಗಳಿಗೆ ರಾಜಕೀಯ ಪ್ರವೇಶದ ಸಿಹಿ ಸುದ್ದಿಯನ್ನು ನೀಡಿದ್ದರು.

ಬೆಂಗಳೂರು ಸೆಂಟ್ರಲ್ ಪ್ರಾಬಲ್ಯತೆ ಹೇಗಿದೆ?
2008ರಲ್ಲಿ ಈ ಲೋಕಸಭಾ ಕ್ಷೇತ್ರ ರಚನೆಯಾಗಿದ್ದು, ಇದೂವರೆಗೂ ಎರಡು ಚುನಾವಣೆಗಳನ್ನು ಎದುರಿಸಿದೆ. ಎರಡು ಬಾರಿಯೂ (2009 ಮತ್ತು 2014) ಬಿಜೆಪಿ ಪಿ.ಸಿ.ಮೋಹನ್ ಸಂಸದರಾಗಿ ಸಂಸತ್ತು ಪ್ರವೇಶ ಮಾಡಿದ್ದಾರೆ. ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಬಿಜೆಪಿಗೆ ಸ್ಪರ್ಧೆ ನೀಡಿದ್ದರು. 2009ರಲ್ಲಿ ಕಾಂಗ್ರೆಸ್ ನಿಂದ ಹೆಚ್.ಟಿ.ಸಾಂಗ್ಲಿಯಾನ ಮತ್ತು 2014ರಲ್ಲಿ ರಿಜ್ವಾನ್ ಅರ್ಷದ್ ಸ್ಪರ್ಧೆ ಮಾಡಿ ಪಿ.ಸಿ.ಮೋಹನ್ ವಿರುದ್ಧ ಸೋಲು ಕಂಡಿದ್ದರು.

ಪಿ.ಸಿ.ಮೋಹನ್ ಮತ್ತು ರಿಜ್ವಾನ್ ಅರ್ಷದ್

2019ರಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಮೋಹನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಯುವ ಮುಖಂಡ ರಿಜ್ವಾನ್ ಅರ್ಷದ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಚುನಾವಣೆಗೂ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ರಚಿಸಿಕೊಂಡಿದ್ದು, ಎರಡೂ ಪಕ್ಷಗಳ ಪರವಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *