ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ: ಜಾವಡೇಕರ್

Public TV
2 Min Read

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನೇ ನೋಡಿಕೊಳ್ಳಲಿ ಎಂದು ಕೇಂದ್ರ ಸಚಿವ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದಾರೆ.

8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಮೋದಿ ಕರೆದುಕೊಂಡು ಬರುತ್ತಿದ್ದಾರೆ ಎನ್ನುವ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ಜಾಮೀನು ಪಡೆಯುವ ಮೂಲಕ ಹೊರಗೆ ಇದ್ದಾರೆ. ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: 8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನಮ್ಮ ತಾರಾ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ. ಆದರೆ ಅವರು ತಮ್ಮ ಆಪ್ತ ಕೆಲ ಅಭ್ಯರ್ಥಿಗಳ ಪರಪ್ರಚಾರ ಮಾಡುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು.

ನಾವು ಬೇರೆ ಪಕ್ಷದ ಜೊತೆ ಎಂದೂ ಜಗಳಕ್ಕೆ ಇಳಿಯಲ್ಲ. ದೇಶದ ಅಭಿವೃದ್ಧಿಗಷ್ಟೇ ಪ್ರಯಾಸ ಪಡುತ್ತಿದ್ದೇವೆ. ಕಾಂಗ್ರೆಸ್ ಅಭಿವೃದ್ಧಿ ವಿಚಾರವನ್ನು ಬಿಟ್ಟು ಬೇರೆ ಎಲ್ಲ ಮಾತುಗಳನ್ನು ಆಡುತ್ತಿದೆ. ರೈತರ ಆತ್ಮಹತ್ಯೆ ಸೇರಿದಂತೆ ಅನಂತ್ ಕುಮಾರ್ ಅವರು ನಿನ್ನೆ ಐದು ಪ್ರಶ್ನೆ ಗಳನ್ನು ಕೇಳಿದ್ದಾರೆ ಅದಕ್ಕೆ ಉತ್ತರ ಕೊಡಲಿ.

ಮೋದಿ ಅಭ್ಯರ್ಥಿ ಗಳ ಜೊತೆ ಸಂವಾದ ಮಾಡಿರುವುದು ಸ್ಫೂರ್ತಿದಾಯಕ ಹಾಗೂ ಇಂದು ಇತಿಹಾಸ ಸೃಷ್ಟಿಸಿದೆ. ಚುನಾವಣೆಗೆ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಜನರ ಮನಸನ್ನು ಗೆಲ್ಲಿ, ಅಭಿವೃದ್ಧಿ ಕೆಲಸ ಮಾಡಿ ಅನ್ನುವ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ತಿಳಿಸಿದರು.

ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಕಾರ್ಯಕರ್ತರೆಲ್ಲರೂ ಬಹಳ ಖುಷಿಯಾಗಿದ್ದಾರೆ. ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರ ಮನಸ್ಸನ್ನ ಗೆಲ್ಲುವಂತೆ ಪ್ರೇರೇಪಿಸಿದ್ದಾರೆ. ರಾಜ್ಯದ ರೈತರ ಸಮಸ್ಯೆ, ನಗರಗಳ ಸಮಸ್ಯೆ ಹಾಗೂ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಏನೇ ಸಮಸ್ಯೆ ಇರಲಿ ಅಭಿವೃದ್ಧಿಯೇ ನಮ್ಮ ಗುರಿ ಎಂದು ತಿಳಿಸಿದ್ದಾರೆ ಎಂದರು.

ಕಾಂಗ್ರೆಸ್ ಬೇರೆ ರಾಜ್ಯಗಳನ್ನ ಉದಾಹರಣೆಯಾಗಿ ತೋರಿಸುತ್ತದೆ. ಬೇರೆ ರಾಜ್ಯಗಳನ್ನ ಬಿಟ್ಟು ಕರ್ನಾಟಕದ ಬಗ್ಗೆ ಮಾತನಾಡಲಿ. ಆದರೆ ನಾವು ನೇರವಾಗಿ ಕನ್ನಡಿಗರ ಬಗ್ಗೆ ಮಾತನಾಡುತ್ತೇವೆ. ಚಾಮುಂಡೇಶ್ವರಿಯಿಂದ ಬಾದಾಮಿಯ ವರೆಗಿನ ಪ್ರವಾಸದ ವೇಳೆ ಜನ ಗೋ ಬಾಕ್ ಸಿದ್ದರಾಮಯ್ಯ ಅಂತ ಹೇಳುತ್ತಾ ಇದ್ದಾರೆ. ನಿನ್ನೆ ಸಿಎಂಗೆ ದಲಿತ ಮತದಾರನೊಬ್ಬ ಬೆವರಿಳಿಸಿದ್ದು ಜನರ ಮನಸ್ಥಿತಿಯನ್ನು ತಿಳಿಸುತ್ತೆ. ಜನರು ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಹಲವಡೆ ನಕಲಿ ಮತದಾರರು ಹುಟ್ಟಿಕೊಂಡಿದ್ದಾರೆ. ತುಮಕೂರು ಸೇರಿದಂತೆ ಅನೇಕ ಭಾಗದಲ್ಲಿ ನಕಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಾವು ಚಾಮುಂಡೇಶ್ವರಿಯಲ್ಲಿ ಮೈತ್ರಿ ಮಾಡಿಕೊಂಡಿಲ್ಲ. ಲಿಂಗಾಯಿತ ವೀರಶೈವ ಮಠವನ್ನು ಟಾರ್ಗೆಟ್ ಮಾಡಿಕೊಂಡು ಹೋಗಿಲ್ಲ. ಅಲ್ಲೂ ಅಭ್ಯರ್ಥಿ ಇದ್ದಾರೆ. ಎಲ್ಲಾ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *