ಪ್ರಜ್ವಲ್ ರೇವಣ್ಣ ಬರ್ತಿರೋದು ನಮಗೂ ಸ್ವಲ್ಪ ಸಮಾಧಾನ ತಂದಿದೆ: ಹೆಚ್‌ಡಿಕೆ

Public TV
1 Min Read

ಚಿಕ್ಕಬಳ್ಳಾಪುರ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಕೊನೆಗೂ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಾನು ರಾಜ್ಯಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ (H.D Kumaraswamy) ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್‌.ಡಿ ದೇವೇಗೌಡ ಹಾಗೂ ನಾನು ಎಲ್ಲೆ ಇದ್ದರೂ ಬಂದು ಎಸ್‌ಐಟಿ ಮುಂದೆ ಹಾಜರಾಗುವ ಮೂಲಕ ತನಿಖೆಗೆ ಸಹಕಾರ ಕೊಡುವಂತೆ ಕೇಳಿಕೊಂಡಿದ್ದೆವು. ಈ ಬಗ್ಗೆ ದೇವೇಗೌಡರು ಎಚ್ಚರಿಕೆ ಕೊಟ್ಟರೆ ನಾನು ಮನವಿ ಮಾಡಿಕೊಂಡಿದ್ದೆ. ಅಲ್ಲದೇ ಇದೇ ವೇಳೆ ಕಾರ್ಯಕರ್ತರ ಮೇಲೆ ನಂಬಿಕೆ ಇದ್ದರೆ ಕೂಡಲೇ ಬರಬೇಕು ಎಂದು ಹೇಳಿದ್ದೆವು. ಇದೀಗ ನಮ್ಮ ಮನವಿಗೆ ಓಗೊಟ್ಟು ಬರುತ್ತಿರುವುದು ಇವತ್ತು ನಮಗೂ ಸ್ವಲ್ಪ ಸಮಾಧಾನ ತಂದಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಏನು ಪ್ರಕ್ರಿಯೆಗಳು ನಡೆಯಬೇಕೋ ನಡೆಯುತ್ತೆ ಎಂದು ಹೆಚ್‌ಡಿಕೆ ತಿಳಿಸಿದರು. ಇದೇ ವೇಳೆ ಷಡ್ಯಂತ್ರ ಬಗ್ಗೆ ಕೇಳಿದಾಗ, ಇವೆಲ್ಲವೂ ಮುಂದೆ ತನಿಖೆ ನಡೆಯಲಿದ್ದು, ಸತ್ಯ ಹೊರಗೆ ಬರುತ್ತೆ ಎಂದು ಹೆಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಯಾರ ಯಾರ ಪಾತ್ರ ಏನಿದೆ?. ಈ ಎಲ್ಲದರ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿದ್ದು, ನೋಡೋಣ ಎಲ್ಲಿಗೆ ತಂದು ನಿಲ್ಲಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮೇ 31 ರಂದು ನಾನು ಬರುತ್ತೇನೆ: ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿದ ಪ್ರಜ್ವಲ್‌ ರೇವಣ್ಣ

ಇದೇ ವೇಳೆ ಪ್ರಜ್ವಲ್‌ ಕ್ಷಮೆ ಕೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಯಕರ್ತರ ನೋವಿಗೆ ಸ್ಪಂದಿಸುವಂತೆ ಕೇಳಿದ್ದೀನಿ. ಕಾರ್ಯಕರ್ತರ ಬಳಿ ಕ್ಷಮೆ ಕೋರಿದ್ದಾನೆ. ಪಾಪ ಈಗಲಾದರೂ ಅವನು ಕಾರ್ಯಕರ್ತರ ಬಳಿ ಕ್ಷಮೆ ಕೇಳುವ ಮೂಲಕ ಅವರ ಬಳಿ ಅಷ್ಟು ಮಮತೆ ಇದೆ ಎಂಬುದನ್ನು ತೋರಿಸಿಕೊಂಡಿದ್ದಾನೆ. ಅದಕ್ಕೆ ನನಗೂ ಸ್ವಲ್ಪ ಸಮಾಧಾನವಾಗಿದೆ ಎಂದರು.

Share This Article