2ನೇ ಕ್ಲಾಸ್ ಬಾಲಕ ಕೊಲೆಯಾದ ನಂತರ ಕ್ಲಾಸ್‍ಗೆ ಬಂದಿದ್ದು ನಾಲ್ಕೇ ಮಕ್ಕಳು

Public TV
2 Min Read

ಗುರ್ಗಾಂವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್‍ನ ಕೊಲೆಯಾಗಿ 10 ದಿನಗಳ ಕಳೆದ ನಂತರ ಆತನ ನಾಲ್ಕು ಸಹಪಾಠಿಗಳು ಮಾತ್ರ ಶಾಲೆಗೆ ಬಂದಿದ್ದಾರೆ. ಅದರಲ್ಲೂ ಇಬ್ಬರು ವಿದ್ಯಾರ್ಥಿಗಳು ಶಾಲೆಯನ್ನ ಬಿಡಲು ತಮ್ಮ ಪೋಷಕರೊಂದಿಗೆ ಬಂದಿದ್ದಾರೆ.

ಸೆಪ್ಟೆಂಬರ್ 8ರಂದು 2ನೇ ತರಗತಿಯ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 42 ವರ್ಷದ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಾಲಕ ಟಾಯ್ಲೆಟ್‍ಗೆ ಹೋದಾಗ ಅಶೋಕ್ ಕುಮಾರ್ ಒಳಗೆ ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಪ್ರದ್ಯುಮನ್ ಟಾಯ್ಲೆಟ್‍ನಿಂದ ಹೊರಗೆ ತೆವಳಿಕೊಂಡು ಬಂದು ಗೋಡೆಯ ಬಳಿ ಕುಸಿದು ಬೀಳೋದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾಲಕನ ಕೊಲೆಯಾದ ನಂತರ ಇದೀಗ ತರಗತಿಗಳು ಪುನಾರಂಭವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಬಾಲಕ ಪ್ರದ್ಯುಮನ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸ್ಥಳದಲ್ಲಿದ್ದ ಸುಭಾಷ್ ಗಾರ್ಗ್ ಎಂಬವರು ಕೂಡ ತಮ್ಮ ಮಗುವನ್ನ ಶಾಲೆಗೆ ಕರೆದುಕೊಂಡು ಬಂದಿದ್ರು. ಭಯಪಡುವಂತದ್ದೇನೂ ಅಲ್ಲ. ಪೊಲೀಸರು ಹಾಗೂ ಸೆಕ್ಯೂರಿಟಿಗಳು ಇಲ್ಲಿದ್ದಾರೆ. ಈಗ ಶಾಲೆಯ ಆಡಳಿತವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಅವರು ಹೇಳಿದ್ರು.

ಆದ್ರೆ ಮತ್ತೊಬ್ಬ ವಿದ್ಯಾರ್ಥಿಯ ಪೋಷಕರು ತಮ್ಮ ಮಗನ ಅಡ್ಮಿಷನ್ ಕ್ಯಾನ್ಸಲ್ ಮಾಡಿಸಲು ಬಂದಿರುವುದಾಗಿ ಹೇಳಿದ್ರು. ಶಾಲೆ ಸರಿಯಾದುದನ್ನೇ ಮಾಡುತ್ತದೆ ಎಂದು ಗೊತ್ತು. ಆದ್ರೆ ನನ್ನ ಮಗುವಿಗೆ ಈಗ ಆ ಸ್ಥಳದ ಬಗ್ಗೆ ಭಯವಿದೆ. ಆತನನ್ನು ಶಾಲೆಗೆ ಹೋಗುವಂತೆ ಬಲವಂತ ಮಾಡಿದೆವು. ಆದ್ರೆ ಆತ ಒಪ್ಪುತ್ತಿಲ್ಲ. ಶಾಲೆಯ ಮಧ್ಯವರ್ಷದಲ್ಲಿ ಮತ್ತೊಂದು ಶಾಲೆಯಲ್ಲಿ ಅಡ್ಮಿಷನ್ ಸಿಗುವುದು ಕಷ್ಟ. ಆದ್ರೆ ನಾವು ಮಾಡಲೇಬೇಕು ಎಂದಿದ್ದಾರೆ.

ಮತ್ತದೇ ತರಗತಿಗೆ ಹೋಗಲು ಹಾಗೂ ಅದೇ ಟಾಯ್ಲೆಟ್ ಬಳಸಬೇಕೆಂಬ ಬಗ್ಗೆ ನನ್ನ ಮಗ ಭಯಗೊಂಡಿದ್ದಾನೆ ಅಂತ ಪ್ರದ್ಯುಮನ್‍ನ ಸಹಪಾಠಿಯೊಬ್ಬನ ಪೋಷಕರು ಹೇಳಿದ್ದಾರೆ
ನಾನು ಮತ್ತೆ ನನ್ನ ಮಗನನ್ನು ಶಾಲೆಗೆ ಕಳಿಸಲ್ಲ. ಆ ಶಾಲೆಯನ್ನ ನಾನು ನಂಬಲ್ಲ ಎಂದು ಒಂದನೇ ತರಗತಿ ವಿದ್ಯಾರ್ಥಿಯೊಬ್ಬನ ಪೋಷಕರು ಹೇಳಿದ್ದಾರೆ.

ಕೊಲೆಯಾದ ಪ್ರದ್ಯುಮನ್ ಪೋಷಕರು ಶಾಲೆ ಪುನಾರಂಭವಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಬಿಐ ತನಿಖೆ ಮುಗಿಯುವವರೆಗೆ ಶಾಲೆ ಕಾಯಬೇಕಿತ್ತು. ಸಾಕ್ಷಿಗಳು ನಾಶವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *