ಅಯ್ಯಪ್ಪ ದರ್ಶನ ಸಿಗದೇ ವಾಪಸ್‌ – ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲ

Public TV
1 Min Read

ತಿರುವನಂತಪುರಂ: ಅಯ್ಯಪ್ಪನ (Ayyappa) ದರ್ಶನಕ್ಕೆಂದೇ 48 ದಿನಗಳವರೆಗೂ ವ್ರತ ಆಚರಿಸಿ ಶಬರಿಮಲೆಗೆ (Sabarimala) ತೆರಳಿದ್ದ ಕರ್ನಾಟಕ (Karnatka) ಸೇರಿ ಹಲವು ರಾಜ್ಯಗಳ ಭಕ್ತರು, ಅಯ್ಯಪ್ಪನ ದರ್ಶನ ಮಾಡಲಾಗದೆಯೇ ಮರಳುತ್ತಿದ್ದಾರೆ.

ಭಕ್ತರ ನಿರ್ವಹಣೆ, ಭಕ್ತರ ವಾಹನಗಳ ನಿರ್ವಹಣೆಯಲ್ಲಿ ಟ್ರಾವಂಕೂರು ದೇವಸ್ಥಾನ ಮಂಡಳಿ (Travancore Devaswom Board) ಮತ್ತು ಪೊಲೀಸರು ಪೂರ್ಣ ವಿಫಲರಾಗಿದ್ದು ಕೇರಳ ಸರ್ಕಾರದ (Kerala Government) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದೇವರ ದರ್ಶನಕ್ಕೆ ಭಕ್ತರು ಹಲವು ಗಂಟೆಗಳ ಕಾಲ ಅನ್ನ, ನೀರು ಇಲ್ಲದೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಪೊಲೀಸರು ಭಕ್ತರ ಮೇಲೆಯೇ ಹಲ್ಲೆ ನಡೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.   ಇದನ್ನೂ ಓದಿ: ಆಕಾಂಕ್ಷಿಯೂ ಅಲ್ಲದೆ ಕೊನೇ ಸಾಲಿನಲ್ಲಿದ್ದ ಭಜನ್ ಲಾಲ್ ಸಿಎಂ ಆಗಿದ್ದು ಹೇಗೆ?

ಮೊದಲು ಪಂಬೆಯಲ್ಲಿ ಪಾರ್ಕ್‌ ಮಾಡಿ ದೇವಸ್ಥಾನಕ್ಕೆ ಭಕ್ತರು ತೆರಳಬಹುದಿತ್ತು. ಆದರೆ ಈಗ ಕೇರಳ ಸರ್ಕಾರ ನಿಲಕ್ಕಲ್‌ನಲ್ಲಿ (Nilakkal) ಭಕ್ತರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿದೆ. ಇಲ್ಲಿಂದ ಸರ್ಕಾರಿ ಬಸ್ಸಿನ ಮೂಲಕ ಭಕ್ತರು ಹೋಗುತ್ತಿದ್ದಾರೆ. ಅವ್ಯವಸ್ಥೆಯ ಕಾರಣದಿಂದ ದರ್ಶನ ಸಿಗದೇ ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿ ಹಲವು ರಾಜ್ಯಗಳ ಭಕ್ತರು ಪಂದಳಂನಿಂದಲೇ ಹಿಂದಿರುಗುತ್ತಿದ್ದಾರೆ.

ಕಣ್ಣೀರಿಟ್ಟ ಬಾಲಕ: ನೀಲಕ್ಕಲ್‌ನಲ್ಲಿ ತಂದೆಯಿಂದ ತಪ್ಪಿಸಿಕೊಂಡ ಪುಟ್ಟ ಬಾಲಕನೊಬ್ಬ ಬಸ್ಸಿನಲ್ಲೇ ತಂದೆಯನ್ನು ಹುಡುಕಿಕೊಡುವಂತೆ ಕಣ್ಣೀರೀಟ್ಟು ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್‌ ಆಗಿದೆ. ಬಾಲಕ ಕಣ್ಣೀರಿಟ್ಟ ಕೆಲ ಹೊತ್ತಿನಲ್ಲೇ ಆತನ ತಂದೆ ವಾಹನದ ಬಳಿ ಪುತ್ರನನ್ನು ಸಂತೈಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಭಕ್ತರೊಬ್ಬರು, ಹಿಂದೆ ನಾನು ಹೋದಾಗ ಈ ರೀತಿಯ ಅನುಭವ ಆಗಲಿಲ್ಲ. ಭಕ್ತರ ಸಂಖ್ಯೆ ಜಾಸ್ತಿ ಏನು ಇಲ್ಲ. ಪಂಬೆಯಲ್ಲಿ ಪಾರ್ಕಿಂಗ್‌ ಜಾಗ ಇದ್ದರೂ ಕಡ್ಡಾಯವಾಗಿ ಭಕ್ತರಿಂದ ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದಲೇ ಸರ್ಕಾರಿ ಬಸ್‌ ಓಡಿಸುತ್ತಿದ್ದಾರೆ. ಆದರೆ ಕೇರಳ ನೋಂದಣಿಯ ವಾಹನಗಳನ್ನು ಬಿಡುತ್ತಿದ್ದಾರೆ. ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

 

Share This Article