ತಂದೆಯದ್ದು ಶವ ಸುಡುವ ಕೆಲಸ-ಕಿತ್ತು ತಿನ್ನುವ ಬಡತನದ ನಡುವೆ ಚಿನ್ನದ ಪದಕ ಪಡೆದ ಪುತ್ರಿ

Public TV
1 Min Read

-ಅಪ್ಪ, ಮಗಳ ಬಾಂಧವ್ಯದ ರಿಯಲ್ ಸ್ಟೋರಿ

ಚಿಕ್ಕೋಡಿ/ಬೆಳಗಾವಿ: ಪೋಷಕರು ಲಕ್ಷಾಂತರ ರೂಪಾಯಿಗಳನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಆದರೂ ಇದರಲ್ಲಿ ಸಾಕಷ್ಟು ಪಾಲಕರ ಆಸೆ ಈಡೇರುವದೇ ಇಲ್ಲ. ಆದರೆ ಇಲ್ಲೊಬ್ಬ ಶವ ಸುಡುವ ವ್ಯಕ್ತಿಯ ಮಗಳು ತನ್ನ ಕಿತ್ತು ತಿನ್ನುವ ಬಡತನದ ನಡುವೆಯೇ ವಾಣಿಜ್ಯ ವಿಭಾಗದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದುಕೊಂಡಿದ್ದಾಳೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಸೀಮಾ ಪ್ರಕಾಶ್ ಕಡು ಬಡತನದಲ್ಲಿ ಜನಿಸಿದ ಯುವತಿ. ವಿದ್ಯಾಭ್ಯಾಸದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲ ಇಟ್ಟುಕೊಂಡಿದ್ದಳು. ನಂತರ ಸಂಕೇಶ್ವರೆ ಪಟ್ಟಣದಲ್ಲಿರುವ ಎಲ್.ಕೆ.ಖೋತ ಕಾಲೇಜಿನಲ್ಲಿ ಅಧ್ಯಯನ ನಡೆಸಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದ ಸಿಕ್ರೆಟ್ರಿಯಲ್ ಪ್ರ್ಯಾಕ್ಟಿಸ್ ವಿಷಯದಲ್ಲಿ ಶೇ.98 ಅಂಕಗಳನ್ನು ಪಡೆದು ಬಂಗಾರದ ಪದಕಕ್ಕೆ ಭಾಜನಳಾಗಿದ್ದಾಳೆ.

ಈ ಯುವತಿಯ ಸಾಧನೆಯ ಹಿಂದೆ ನಿಂತಿರುವುದು ಇವಳ ತಂದೆ. ಸಂಕೇಶ್ವರ ಪಟ್ಟಣದ ಶವಾಗಾರದಲ್ಲಿ ಶವ ಸುಟ್ಟು ಹಾಗೂ ಕೂಲಿ ಕೆಲಸದಿಂದ ಗಳಿಸಿದ ಹಣದಿಂದ ತನ್ನ ಮಗಳಿಗೆ ವಿದ್ಯಾಭ್ಯಾಸ ನೀಡಿ ಈ ಹಂತಕ್ಕೆ ತಲುಪಿಸಿದ್ದಾರೆ. ಅಲ್ಲದೇ ಈಗ ಸೀಮಾಳಿಗೆ ಚಾರ್ಟೆಡ್ ಅಕೌಂಟ್ ಶಿಕ್ಷಣಕ್ಕಾಗಿ ಪ್ರವೇಶ ದೊರಕಿಸಿದ್ದಾರೆ. ಎಷ್ಟೇ ಕಷ್ಟ ಬಂದರೂ ನನ್ನ ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಆಗುವುದಿಲ್ಲ ಎಂದು ಮಗಳ ಬಗ್ಗೆ ಹೆಮ್ಮೆಯಿಂದ ತಂದೆ ಪ್ರಕಾಶ್ ಇಂಗಳೆ ಹೇಳಿಕೊಂಡಿದ್ದಾರೆ.

ಇಷ್ಟೆಲ್ಲ ಕಷ್ಟ ಪಟ್ಟು ಸಾಕಿ ಸಲುಹಿದ ತಂದೆ ತಾಯಿ ಬಗ್ಗೆ ಸೀಮಾ ತುಂಬಾ ಪ್ರೀತಿ ಇಟ್ಟುಕೊಂಡಿದ್ದಾಳೆ. ಶವ ಸುಟ್ಟು ಅಲ್ಲದೇ ಕೂಲಿ ಕೆಲಸ ಮಾಡಿ ನಮ್ಮ ತಂದೆ ನನಗೆ ವಿದ್ಯಾಭ್ಯಾಸ ಕಲಿಸಿದ್ದಾರೆ. ಅವರ ಆಶೀರ್ವಾದದಿಂದ ಇಂದು ನಾನು ಚಿನ್ನದ ಪದಕ ಪಡೆದುಕೊಂಡಿದ್ದೇವೆ. ನಾನು ವಿದ್ಯಾಭ್ಯಾಸ ಮುಗಿಸಿ ನಮ್ಮ ತಂದೆಯನ್ನ ಈ ಕೆಲಸದಿಂದ ಬಿಡಿಸಿ, ನಮ್ಮ ಪೋಷಕರನ್ನು ಸಂತೋಷದಿಂದ ಇರಲು ಬಯಸುತ್ತೇನೆ ಎಂದು ಸೀಮಾ ತನ್ನ ತಂದೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *