18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ

Public TV
2 Min Read

– ಕತ್ತಲೆಮನೆಯಲ್ಲಿರುವ ಕುಟುಂಬಕ್ಕೆ ಬೇಕಿದೆ ಬೆಳಕಿನಾಸರೆ

ರಾಯಚೂರು: ಈ ಕುಟುಂಬಕ್ಕೆ ಅದ್ಯಾವ ಶಾಪ ತಟ್ಟಿದೆಯೋ ಗೊತ್ತಿಲ್ಲ. ಮನೆಯಲ್ಲಿನ ಪ್ರತಿಯೊಬ್ಬರಿಗೂ ಒಂದೊಂದು ಹಂತದಲ್ಲಿ ದೃಷ್ಟಿ ಸಂಪೂರ್ಣವಾಗಿ ಮಾಯವಾಗುತ್ತದೆ. ರಾಯಚೂರಿನ ಸಿಂಧನೂರು ತಾಲೂಕಿನ ಹೆಡಗಿನಾಳದ ಸುರೇಶ್ ಹಾಗೂ ಬಸ್ಸಮ್ಮ ದಂಪತಿಯ ಕುಟುಂಬಕ್ಕೆ ದೃಷ್ಟಿದೋಷ ಕಾಡುತ್ತಿದೆ. ಕಷ್ಟಗಳೆಲ್ಲಾ ಹುಡುಕಿಕೊಂಡು ಬಂದು ಇವರ ಮನೆಯಲ್ಲೇ ಠಿಕಾಣಿ ಹೂಡಿದ ಹಾಗಿದೆ ಇವರ ಪರಿಸ್ಥಿತಿ.

ಕೂಲಿ ಕೆಲಸ ಮಾಡುತ್ತಿದ್ದ ಸುರೇಶ್ ಪಾಶ್ರ್ವವಾಯುನಿಂದ ಕೈ ಸ್ವಾಧೀನ ಕಳೆದುಕೊಂಡು ಸುಮಾರು ವರ್ಷಗಳಾಗಿವೆ. ಮೂರನೇ ಮಗುವಿಗೆ ಜನ್ಮ ನೀಡಿದ ಬಳಿಕ ಬಸ್ಸಮ್ಮ ತನ್ನ ದೃಷ್ಟಿಯನ್ನ ಕಳೆದುಕೊಂಡಿದ್ದಾಳೆ. 6ನೇ ತರಗತಿವರೆಗೆ ಶಾಲೆಗೆ ಹೋಗುತ್ತಾ ಕೂಲಿ ಕೆಲಸವನ್ನೂ ಮಾಡುತ್ತಿದ್ದ ದೊಡ್ಡ ಮಗಳು ಜ್ಯೋತಿಗೆ ನಿಧಾನವಾಗಿ ದೃಷ್ಟಿ ಹೋಗಿದೆ. ಈಗ ಇರುವ ಇಬ್ಬರು ಗಂಡು ಮಕ್ಕಳಲ್ಲಿ ದೊಡ್ಡ ಹುಡುಗ ನವೀನ್ ಕುಮಾರ್ ಗೆ ದೃಷ್ಟಿ ಮಂದವಾಗುತ್ತಿದೆ. ಕೂಡಲೇ ಚಿಕಿತ್ಸೆ ಸಿಗದಿದ್ದರೆ ನವೀನ್ ಕೂಡ ದೃಷ್ಟಿ ಕಳೆದುಕೊಳ್ಳುತ್ತಾನೆ. ಅನಕ್ಷರತೆ, ಬಡತನದಿಂದ ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಅಂತ ಸುಮ್ಮನೆ ಕುಳಿತಿದ್ದ ಕುಟುಂಬಕ್ಕೆ ನವೀನ್ ಓದುವ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸ್ವತಃ ಕಣ್ಣಿನ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗಲೇ ಕುಟುಂಬದ ಸಮಸ್ಯೆ ಬೆಳಕಿಗೆ ಬಂದಿದೆ.

ಈ ಕುಟುಂಬ ‘ಪಾಲಿಕೋಲಿಯಾ’ ಹೆಸರಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಕೆಲವರಿಗೆ ಅನುವಂಶಿಕವಾಗಿ ಬಂದರೆ, ಇನ್ನೂ ಕೆಲವರಿಗೆ 18 ವರ್ಷ ತುಂಬುವುದರೊಳಗೆ ದೃಷ್ಟಿ ಮಂದವಾಗುತ್ತಾ ಹೋಗುತ್ತದೆ. ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತಾ ದಿನದಿಂದ ದಿನಕ್ಕೆ ಕತ್ತಲು ಆವರಿಸುತ್ತದೆ. ಈ ಹಿಂದೆ ಕಣ್ಣಿನ ತಪಾಸಣೆ ಶಿಬಿರದಲ್ಲಿ ನವೀನ್ ನನ್ನ ಪರೀಕ್ಷಿಸಿದ್ದ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡಲು ಮುಂದೆ ಬಂದಿದ್ದಾರೆ. ನವೀನ್ ಸಹೋದರಿ ಹಾಗೂ ತಮ್ಮನನ್ನೂ ಪರೀಕ್ಷಿಸಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಕನಿಷ್ಠ ಬಸ್ ಚಾರ್ಜ್‍ಗೂ ಹಣವಿಲ್ಲದೆ ಈ ಕುಟುಂಬ ಬೆಂಗಳೂರಿಗೆ ಚಿಕಿತ್ಸೆಗಾಗಿ ಓಡಾಡಲು ಪರದಾಡುತ್ತಿದೆ. ಹೀಗಾಗಿ ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯವಿದೆ.

ಸಿಂಧನೂರಿನ ನೇತ್ರತಜ್ಞ ಡಾ.ಚನ್ನನಗೌಡ ಪಾಟೀಲ್ ತಮ್ಮ ಹಂತದ ಚಿಕಿತ್ಸೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಆದರೆ ಜೀವನಕ್ಕೆ ಮುಂದೆ ಯಾವುದೇ ಭರವಸೆಗಳಿಲ್ಲದೆ ಕೇವಲ ವಿಕಲಚೇತನರ ಮಾಸಿಕ ವೇತನದಲ್ಲಿ ಸಂಸಾರ ನಿರ್ವಹಣೆ ಮಾಡುತ್ತಿರುವ ಕುಟುಂಬಕ್ಕೆ ಆರ್ಥಿಕ ಸಬಲತೆಗಾಗಿ ಆಸರೆ ಬೇಕಿದೆ. ಮಕ್ಕಳ ದೃಷ್ಟಿ ಸಮಸ್ಯೆ ಬಗೆಹರಿದರೆ ಇವರ ಬದುಕಲ್ಲಿ ಸಣ್ಣದಾಗಿ ನೆಮ್ಮದಿಯ ಬೆಳಕು ಆರಂಭವಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *