ಬಂಗಾಳದಲ್ಲಿ ಭುಗಿಲೆದ್ದ ರಾಜಕೀಯ ಬಡಿದಾಟ – 1 ದಿನ ಮೊದಲೇ ಬಹಿರಂಗ ಪ್ರಚಾರಕ್ಕೆ ಆಯೋಗ ಬ್ರೇಕ್!

Public TV
2 Min Read

ನವದೆಹಲಿ: ಮೇ 19ರಂದು 7 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 7ನೇ ಹಂತದ ಮತದಾನಕ್ಕೆ 5 ದಿನ ಬಾಕಿ ಇದೆ. ಪಶ್ಚಿಮ ಬಂಗಾಳದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಮತ್ತೊಂದೆಡೆ ಹಿಂಸಾಚಾರವೂ ಭುಗಿಲೆದ್ದಿದೆ. ಪರಿಣಾಮ ಚುನಾವಣಾ ಆಯೋಗ ಬಹಿರಂಗ ಪ್ರಚಾರಕ್ಕೆ ಒಂದು ದಿನ ಮೊದಲೇ ಮೊಟಕುಗೊಳಿಸಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿರ ಭದ್ರಕೋಟೆ ಭೇದಿಸಲೇ ಬೇಕು ಎಂದು ಶಪಥ ಮಾಡಿದಂತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೋಲ್ಕತಾದಲ್ಲಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿದ್ದರು. ಈ ವೇಳೆ ಭಾರೀ ಹಿಂಸಾಚಾರವಾಗಿತ್ತು. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಸಿಆರ್ ಪಿಎಫ್ ರಕ್ಷಣೆ ಸಿಗದಿದ್ದರೆ ಜೀವಂತವಾಗಿ ವಾಪಸ್ ಬರುತ್ತಿರಲಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ವಿದ್ಯಾರ್ಥಿ ಪರಿಷತ್‍ನವರೇ ದಾಳಿ ಮಾಡಿದ್ದು, ಶಿಕ್ಷಣ ತಜ್ಞ ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು ಕೂಡ ಕೇಸರಿ ಟೀ-ಶರ್ಟ್ ಧರಿಸಿದ್ದ ಟಿಎಂಸಿ ಕಾರ್ಯಕರ್ತರೇ ಎಂದು ಆರೋಪಿಸಿದ್ದರು. ಅಲ್ಲದೇ ಪಶ್ಚಿಮ ಬಂಗಾಳದಲ್ಲಿ ಮಾತ್ರ ಏಕೆ ಇಂಥಾ ಹಿಂಸಾಚಾರ ಎಂದು ಫೋಟೋಗಳನ್ನು ಸಾಕ್ಷಿ ಸಮೇತ ತೋರಿಸಿದ್ದರು. ಬಂಗಾಳದಲ್ಲಿ ಅಮಿತ್ ಶಾ ಸಿಎಂ ಆಗಲು ಬಂದಿಲ್ಲ. ಅಲ್ಲಿ ಬಿಜೆಪಿ ಗೆದ್ದರೆ ಬಂಗಾಳದವರೇ ಸಿಎಂ ಆಗುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು.

ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಟಿಎಂಸಿ ಪಕ್ಷದ ವಕ್ತಾರ ಡರೆಕ್ ಒಬ್ರಿಯನ್, ಹಿಂಸಾಚಾರಕ್ಕೆ ಬಿಜೆಪಿಗರೇ ಕಾರಣ. ಗೂಂಡಾಗಳನ್ನು ಬಾಡಿಗೆಗೆ ತಂದು ದಾಂದಲೆ ಎಬ್ಬಿಸಿದ್ದಾರೆ. ರೋಡ್ ಶೋಗೆ ಆಯುಧಗಳ ಸಮೇತ ಬನ್ನಿ ಎಂದು ವಾಟ್ಸಾಪ್‍ನಲ್ಲಿ ಶೇರ್ ಮಾಡಿದ್ದಾರೆ. ವಿದ್ಯಾಸಾಗರ್ ಪ್ರತಿಮೆ ಧ್ವಂಸಗೊಳಿಸಿ ಬಂಗಾಳಿಗಳ ಅಸ್ಮಿತೆಗೆ ಧಕ್ಕೆ ತಂದಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ವೀಡಿಯೋ ಸಾಕ್ಷಿ ನೀಡಿದ್ದರು.

ಈ ಬೆಳವಣಿಗೆಗಳ ನಡುವೆಯೇ ಹಿಂಸಾಚಾರ ಹೆಚ್ಚಾದ ಪರಿಣಾಮ ಬಹಿರಂಗ ಪ್ರಚಾರ ನಡೆಸಲು ನೀಡಿದ್ದ ಅವಧಿಯನ್ನು ಒಂದು ದಿನದ ಮೊದಲೇ ಅಂತ್ಯಗೊಳಿಸಿ ಆದೇಶ ನೀಡಿದೆ. ಮೇ 19 ರಂದು ಮತದಾನ ಪ್ರಕ್ರಿಯೆ ನಡೆಯುವ ಕಾರಣ ಮೇ 17ರ ವರೆಗೂ ಬಹಿರಂಗ ಪ್ರಚಾರ ನಡೆಸಲು ಅವಕಾಶ ಇತ್ತು. ಸದ್ಯ ಈ ಅವಕಾಶವನ್ನು ಚುನಾವಣಾ ಆಯೋಗ ಮೋಟಕುಗೊಳಿಸಿದೆ.

ಪಶ್ಚಿಮ ಬಂಗಾಳದ ದುಮ್ ದುಮ್, ಬರಸಾತ್, ಜಯನಗರ, ಬಸಿರ್ಹಾತ್, ಮಥುರಾಪುರ, ಡೀಯಾಮೊಂಡ್ ಹರ್ ಬೊವುರ್, ಸೌಥ್ ಆ್ಯಂಡ್ ಕೋಲ್ಕತ್ತಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇತ್ತ ಚುನಾವಣಾ ಆಯೋಗ ಬಹಿರಂಗ ಪ್ರಚಾರ ಮೊಟಕುಗೊಳಿಸಿ ಆದೇಶ ನೀಡುತ್ತಿದಂತೆ ಸಿಎಂ ಮಮತಾ ಬ್ಯಾನರ್ಜಿ ಅವರು ಸುದ್ದಿ ಗೋಷ್ಠಿ ನಡೆಸಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *