ಎತ್ತಿನಹೊಳೆ ಯೋಜನೆಯಲ್ಲಿ ರಾಜಕೀಯ ಶುರು – ಇತ್ತ ಚಿತ್ರದುರ್ಗದಲ್ಲಿ ಎತ್ತುಗಳಾದ ರೈತರು

Public TV
2 Min Read

ಹಾಸನ, ಚಿತ್ರದುರ್ಗ: ಬಹುಚರ್ಚೆಯ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ರಾಷ್ಟ್ರೀಯ ಹಸಿರು ಪೀಠ ಗ್ರೀನ್‍ಸಿಗ್ನಲ್ ನೀಡಿದೆ. ಆದ್ರೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಕಚ್ಚಾಟ ಮುಂದುವರಿದಿದೆ.

ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸೋ ಎತ್ತಿನಹೊಳೆ ಕಾಮಗಾರಿಗೆ ಎನ್‍ಜಿಟಿ ಅಸ್ತು ಎಂದಿದ್ರೂ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಕೋಲಾರ- ಚಿಕ್ಕಬಳ್ಳಾಪುರಕ್ಕೆ ನೀರು ಕೊಟ್ಟೇ ಕೊಡ್ತೀವಿ ಅಂತ ಸರ್ಕಾರದವರು ಹೇಳಿ ಹೊರಟಿದ್ದಾರೆ. ಆದ್ರೆ ಈ ವರ್ಷ ಕೊಡ್ತಾರೋ ಮುಂದಿನ ವರ್ಷ ಕೊಡ್ತಾರೋ ಅಥವಾ ಅದರ ಮುಂದಿನ ವರ್ಷ ಕಾಂಗ್ರೆಸ್ ಸರ್ಕಾರ ಬಂದಾಗ ಕೊಡ್ತಾರೋ ಗೊತ್ತಿಲ್ಲ. ಈ ವರ್ಷ ನೀರು ಕೊಡೋದು ಕಷ್ಟ ಅಂತ ಕಾಣತ್ತೆ ಎಂಬುವುದಾಗಿ ಮಾಜಿ ಪ್ರಧಾನಿ ದೇವೇ ಗೌಡ ಹೇಳಿದ್ದಾರೆ.

ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಜು ಎತ್ತಿನಹೊಳೆ ಯೋಜನೆ ವೈಜ್ಞಾನಿಕವಾಗಿಯೇ ಇದೆ. ಮುಂದಿನ ಜನವರಿ ವೇಳೆಗೆ ಮೊದಲ ಹಂತದ ಕಾಮಗಾರಿ ಮುಗಿಸಿ ನೀರನ್ನು ಲಿಫ್ಟ್ ಮಾಡಿ ಬೇಲೂರು ಕಡೆಗೆ ಹರಿಸ್ತೇವೆ ಅಂದ್ರು. ಇದನ್ನು ಮಾಡಲಾಗದವರು ರಾಜಕೀಯಕ್ಕಾಗಿ ಏನೇನೋ ಮಾತಾಡ್ತಿದ್ದಾರೆ ಅಂತ ಕುಟುಕಿದ್ರು.

ಒಟ್ಟಿನಲ್ಲಿ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಪಶ್ಚಿಮಘಟ್ಟಗಳಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ. ಜೊತೆಗೆ ಹೇಮಾವತಿ ಜಲಾಶಯ ಕೂಡ ಭರ್ತಿ ಆಗಿಲ್ಲ. ಇನ್ನು ಎತ್ತಿನಹೊಳೆ ಮೂಲಕ ನೀರು ಎಲ್ಲಿಂದ ಹರಿಯಲಿದೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಮಳೆಯಿರಲಿಲ್ಲ. ಕೆರೆ-ಕಟ್ಟೆಗಳು ಬರಿದಾಗಿ ಅಂತರ್ಜಲ ಕುಸಿದಿತ್ತು. ಕುಡಿವ ನೀರಿಗೂ ಹಾಹಾಕಾರ ಏರ್ಪಟ್ಟಿತ್ತು. ಇದ್ರಿಂದ ನೊಂದಿದ್ದ ರೈತರು
ದನಕರು, ಎತ್ತು ಮಾರಾಟ ಮಾಡಿ ಕೃಷಿಯಿಂದ ವಿಮುಖರಾಗಿದ್ರು.

ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಉತ್ತಮ ಮಳೆಯಾಗುತ್ತಿದೆ. ಇದು ಮತ್ತೆ ಕೃಷಿ ಚಟುವಟಿಕೆಗೆ ರೈತರನ್ನ ಪ್ರೇರೇಪಿಸಿದೆ. ಎತ್ತುಗಳು ಸಿಗದಿದ್ರೂ ಅನ್ನದಾತ ಉಳುಮೆಗೆ ಮುಂದಾಗಿದ್ದಾನೆ. ಮನೆ ಮಂದಿಯೆಲ್ಲಾ ಸೇರಿ ನೊಗಕ್ಕೆ ಹೆಗಲು ಕೊಟ್ಟು ಉಳುಮೆ ಕಾರ್ಯದಲ್ಲಿ ತೊಡಗಿದ್ದಾರೆ.

ತಮ್ಮ ಕೈಗಳು ಹೆಪ್ಪುಗಟ್ಟಿದ್ದರೂ ದಿಟ್ಟ ಮನಸ್ಸಿನಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿರೋ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗೊಲ್ಲರಹಟ್ಟಿ ರೈತರನ್ನ ಕೇಳಿದ್ರೆ, ಹಲವಾರು ವರ್ಷಗಳಿಂದ ಮಳೆಯೇ ಇರಲಿಲ್ಲ. ಈಗ ಕಷ್ಟಪಟ್ಟು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ ಅಂತ ಹೇಳ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *