ಮಂಡ್ಯ: ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ನನಗೆ ಪಕ್ಷ ಯಾವುದೇ ಪಾತ್ರ ಕೊಟ್ಟರೂ ನಾನು ಮಾಡುತ್ತೇನೆ. ನನಗೆ ರಾಜಕಾರಣ ಹೊಸದು ಎಂದು ನಟ, ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು ಚುನಾವಣಾ ಪ್ರಚಾರ ಮಾಡಿ ಬಳಿಕ ಆಬಲವಾಡಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕನಸು ಮನಸ್ಸಿನಲ್ಲೂ ನಾನು ಅಭ್ಯರ್ಥಿಯಾಗಬೇಕು ಅಂದುಕೊಂಡಿರಲಿಲ್ಲ. ಆದ್ರೆ ಜಿಲ್ಲೆಯ ಜನಪ್ರತಿನಿಧಿಗಳು ತೆಗೆದುಕೊಂಡ ನಿರ್ಧಾರಕ್ಕೆ ಪಕ್ಷ ನನಗೆ ಟಿಕೆಟ್ ಕೊಟ್ಟಿದೆ. ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ನನ್ನನ್ನ ಗೆಲ್ಲಿಸಿ. ನನಗೆ ಪಕ್ಷ ಯಾವದೇ ಪಾತ್ರ ಕೊಟ್ಟರೂ ನಾನು ಮಾಡುತ್ತೇನೆ ಎಂದು ಹೇಳಿದ್ರು.
ನನಗೆ ರಾಜಕಾರಣ ಹೊಸದು. ಆದ್ರೆ ಪ್ರಾಮಾಣಿಕತೆ, ಬದ್ಧತೆಯನ್ನು ಮಾತ್ರ ಯಾರು ಪ್ರಶ್ನೆ ಮಾಡುವಂತಿಲ್ಲ. ನನ್ನ ಜೀವನ ಪೂರ್ತಿ ನಿಮ್ಮ ಜೊತೆ ಇರ್ತೀನಿ. ದೇಶದ ಯಾವ ಮುಖ್ಯಮಂತ್ರಿಗಳು ಮಾಡದ ಜನಹಿತ ಕೆಲಸಗಳನ್ನ ಮಾಡಿ ಕುಮಾರಣ್ಣ ನಿಮ್ಮ ಹೃದಯದಲ್ಲಿದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಮಂಡ್ಯ ಜನ ಏಳಕ್ಕೆ ಏಳು ಸ್ಥಾನಗಳನ್ನ ಗೆಲ್ಲಿಸಿಕೊಟ್ಟಿದ್ದೀರಿ. ನಿಮ್ಮ ಋಣ ತೀರಿಸಲು ಏಳು ಜನ್ಮ ತಾಳಿದ್ರೂ ಸಾಲಲ್ಲ ಎಂದು ನಮ್ಮ ತಂದೆ ಯಾವಾಗಲು ಹೇಳುತ್ತಾರೆ ಅಂದ್ರು.
ಇದೀಗ ನಿಮ್ಮ ಮಗನಾಗಿ ನನ್ನ ಸ್ವೀಕರಿಸುತ್ತೀರಾ ಎಂದು ನಿಮ್ಮನ್ನು ಪ್ರಶ್ನೆ ಕೇಳುತ್ತಿದ್ದೇನೆ. ದಯವಿಟ್ಟು ನನ್ನನ್ನ ಗೆಲ್ಲಿಸಿ, ಡೆಲ್ಲಿಯಲ್ಲಿ ಜಿಲ್ಲೆಯ ಪರವಾಗಿ ಧ್ವನಿಯಾಗಲಿಕ್ಕೆ ಅವಕಾಶ ಮಾಡಿಕೊಡಿ. ನನಗೆ ಭಾಷಣ ಮಾಡಲಿಕ್ಕೆ ಬರೋದಿಲ್ಲ. ನನ್ನ ಭಾವನೆಗಳನ್ನ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ ಎಂದು ಅವರು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv