ಬಿರುಗಾಳಿ ಎಬ್ಬಿಸಿದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆ: ತೆಲಂಗಾಣದಲ್ಲಿ ಟಿಆರ್‌ಎಸ್ ಭರ್ಜರಿ ಪ್ರಚಾರ

Public TV
2 Min Read

ರಾಯಚೂರು: ತೆಲಂಗಾಣದ ನಾರಾಯಣಪೇಟೆ ಕ್ಷೇತ್ರದ ಟಿಆರ್‌ಎಸ್ ಪಕ್ಷದ ಶಾಸಕ ಎಸ್‌ ಆರ್‌ ರೆಡ್ಡಿ ಹಾಗೂ ರಾಯಚೂರು ನಗರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮಧ್ಯೆ ಜಟಾಪಟಿ ಪೈಪೋಟಿ ಶುರುವಾಗಿದೆ. ರಾಜ್ಯವಾಗಲಿ, ಕ್ಷೇತ್ರವಾಗಲಿ, ಪಕ್ಷವಾಗಲಿ ಒಂದಕ್ಕೊಂದು ಸಂಬಂಧವೇ ಇಲ್ಲದಿದ್ದರೂ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತಾ, ಒಬ್ಬರನ್ನೊಬ್ಬರು ಸೋಲಿಸಲು ಸಜ್ಜಾಗಿದ್ದಾರೆ.

ರಾಯಚೂರು ನಗರದಲ್ಲಿ ಪ್ರತಿಷ್ಠಿತ ನವೋದಯ ಮೆಡಿಕಲ್ ಕಾಲೇಜು ನಡೆಸುತ್ತಿರುವ ಎಸ್‌ ಆರ್‌ ರೆಡ್ಡಿ ತೆಲಂಗಾಣದ ನಾರಾಯಣಪೇಟೆ ಕ್ಷೇತ್ರದ ಟಿಆರ್‌ಎಸ್ ಪಕ್ಷದ ಶಾಸಕ. ಡಾ.ಶಿವರಾಜ್ ಪಾಟೀಲ್ ಮೂಲತಃ ಕಾರ್ಡಿಯಾಲಾಜಿಸ್ಟ್ ಆಗಿದ್ದವರು ಈಗ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ.‌ ಈ ಇಬ್ಬರು ಶಾಸಕರಿಗೆ ರಾಜಕೀಯ ಕಾರಣಕ್ಕೆ ಯಾವುದೇ ಪೈಪೋಟಿಯಿಲ್ಲ. ಆದರೆ ಒಬ್ಬರನ್ನೊಬ್ಬರು ಸೋಲಿಸಲು ಸಜ್ಜಾಗಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

ಈ ಹಿಂದೆ ಪಶುಸಂಗೋಪ‌ನಾ ಸಚಿವ ಪ್ರಭುಚೌಹಾಣ್ ರಾಯಚೂರಿಗೆ ಬಂದಾಗ ಸಚಿವರ ಗಮನ ಸೆಳೆಯಲು ಶಾಸಕ ಶಿವರಾಜ್ ಪಾಟೀಲ್ ನಮ್ಮ ಅಭಿವೃದ್ಧಿಯನ್ನ ಕಡೆಗಣಿಸುವುದಾದರೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಅಂತ ಹೇಳಿದ್ದರು. ಈ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದೆ ತಡ. ತೆಲಂಗಾಣ ಸರ್ಕಾರ ಬಿಜೆಪಿ ವಿರುದ್ದ ಧ್ವನಿ ಎತ್ತಲು ಈ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡಿತು. ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಪಾದಯಾತ್ರೆಗೆ‌ ಟಾಂಗ್ ಕೊಡಲು ತೆಲಂಗಾಣ ಸಚಿವ ಕೆ ಟಿ ರಾಮ್ ರಾವ್ ಶಿವರಾಜ್ ಪಾಟೀಲ್ ಹೇಳಿಕೆಯನ್ನೇ ಬಳಸಿಕೊಂಡರು. ಹೀಗಾಗಿ ಮುಜುಗರಕ್ಕೊಳಗಾದ ಬಿಜೆಪಿ ಹೈಕಮಾಂಡ್ ಶಿವರಾಜ್ ಪಾಟೀಲ್ ಅವರನ್ನ ತರಾಟೆಗೆ ತೆಗೆದುಕೊಂಡು, ತೆಲಂಗಾಣಕ್ಕೆ ಹೋಗಿ ಡ್ಯಾಮೇಜ್ ತುಂಬಲು ತಾಕೀತು ಮಾಡಿತ್ತು. ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರರು

ತೆಲಂಗಾಣದಲ್ಲಿ ಭಾಷಣ ಮಾಡಿದ ಶಿವರಾಜ್ ಪಾಟೀಲ್ ಎಸ್‌ಆರ್‌ ರೆಡ್ಡಿ ವಿರುದ್ದ ಹರಿಹಾಯ್ದು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸಲು ಮನೆಮನೆಗೆ ತೆರಳುತ್ತೇವೆ ಅಂತ ಆಕ್ರೋಶ ವ್ಯಕ್ತಪಡಿಸಿ ಬಂದಿದ್ದರು. ಶಿವರಾಜ್ ಪಾಟೀಲ್ ಭಾಷಣದಿಂದ ಆಕ್ರೋಶಗೊಂಡಿರುವ ಎಸ್‌ಆರ್‌ ರೆಡ್ಡಿ ಈಗ ಶಿವರಾಜ್ ಪಾಟೀಲ್‌ ವಿರುದ್ದ ಸೇಡಿಗೆ ಮುಂದಾಗಿದ್ದಾರೆ. ತೆಲಂಗಾಣದಲ್ಲಿ ರಾಯಚೂರು ಅಭಿವೃದ್ಧಿ ಬಗ್ಗೆ ಸುಳ್ಳುಗಳ ಮಳೆ ಸುರಿಸಿದ್ದಾರೆ. ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಿದ್ದಾರೆ, ನಾನು ಸಮ್ಮನಿರಲ್ಲ ಅಂತ ಎಸ್ ಆರ್ ರೆಡ್ಡಿ ಗುಡುಗಿದ್ದಾರೆ.

ಒಟ್ಟಿನಲ್ಲಿ ಶಾಸಕ ಶಿವರಾಜ್ ಪಾಟೀಲ್ ಆಡಿದ ಒಂದು ಮಾತು ಈಗ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಜಿಲ್ಲೆಯ ಜನರ ಆಕ್ರೋಶದ ಜೊತೆ ಹೈಕಮಾಡ್ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೇ ತೆಲಂಗಾಣದಲ್ಲಿ ಟಿಆರ್‌ಎಸ್‌ ಪಕ್ಷ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *