ಯುವಕರ ಬೈಕ್ ವೀಲಿಂಗ್‍ಗೆ ಬ್ರೇಕ್- 37 ಬೈಕ್ ಗಳನ್ನು ಸೀಜ್ ಮಾಡಿದ ಪೊಲೀಸರು

Public TV
1 Min Read

ತುಮಕೂರು: ಜಿಲ್ಲೆಯ ಶಿರಾದಲ್ಲಿ ಯುವಕರ ಬೈಕ್ ವೀಲಿಂಗ್ ಕ್ರೇಜ್ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ವೀಲಿಂಗ್ ಪರಿಣಾಮ ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ನಡೆಯುತ್ತಿತ್ತು ಈಗ ವೀಲಿಂಗ್ ಪುಂಡರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕರ ಸಹಿತ 37 ಬೈಕ್ ಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.

ಶಿರಾನಗರ ಹಾಗೂ ರಾಷ್ಟ್ರೀಯ ಹೆದ್ದಾರಿ 04ರಲ್ಲಿ ವ್ರೂಂ… ವ್ರೂಂ… ಅಂತಾ ಕ್ರೇಜಿ ಬಾಯ್ಸ್ ಪಡೆ ಬೈಕ್ ವೀಲಿಂಗ್ ನಡೆಸಿ ಹಲವರ ಪ್ರಾಣಕ್ಕೆ ಸಂಚಕಾರ ತಂದಿದ್ದರು. ವೀಲಿಂಗ್ ಮಾಡುವ ಭರದಲ್ಲಿ ಚಿಗುರು ಮೀಸೆಯ ಯುವಕರು ಹೈವೇ ಎನ್ನದೇ, ಜನನಿಬಿಡ ರಸ್ತೆ ಎನ್ನದೇ ಅಡ್ಡಾದಿಡ್ಡಿಯಾಗಿ ವೀಲಿಂಗ್ ಮಾಡುತ್ತಾ ಶೋ ಕೊಡುತ್ತಿದ್ದರು. ಇವರ ವೀಲಿಂಗ್ ಕಾಟಕ್ಕೆ ಹಲವಾರು ಅಪಘಾತಗಳು ನಡೆದು ಕೆಲ ಜೀವಗಳೂ ಬಲಿಯಾಗಿವೆ. ಇದರಿಂದ ಎಚ್ಚೆತ್ತುಕೊಂಡ ಶಿರಾನಗರ ಪೊಲೀಸರು ಬೈಕ್ ವೀಲಿಂಗ್‍ಗೆ ಬ್ರೇಕ್ ಹಾಕಿದ್ದಾರೆ. ವೀಲಿಂಗ್ ಮಾಡುತ್ತಿದ್ದ 37 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. 37 ಯುವಕರ ಮೇಲೂ ಕೇಸ್ ಹಾಕಲಾಗಿದೆ.

ಕೇವಲ ಬೈಕ್ ವೀಲಿಂಗ್ ಶೂರರಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಅಪ್ರಾಪ್ತ ಬೈಕ್ ಸವಾರರ ಮೇಲೂ ಶಿರಾ ಪೊಲಿಸರು ಕಣ್ಣಿಟ್ಟು ಕೆಲವರಿಗೆ ದಂಡ ಹಾಕಲಾಗಿದೆ. ಅಪ್ರಾಪ್ತರ ಪೋಷಕರಿಗೆ ಕರೆದು ಸಭೆ ನಡೆಸಿ ಮಕ್ಕಳಿಗೆ ತಿಳಿ ಹೇಳುವಂತೆ ತಾಕೀತು ಮಾಡಲಾಗಿದೆ. ಬೈಕ್ ವೀಲಿಂಗ್‍ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರಿಂದ ಶಿರಾನಗರದ ಜನತೆ ಹಾಗೂ ಹೆದ್ದಾರಿ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶಿರಾ ಪೊಲೀಸರ ಬೈಕ್ ವೀಲಿಂಗ್ ವಿರುದ್ಧ ಕಾರ್ಯಾಚರಣೆಯಿಂದಾಗಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಅಲ್ಲದೆ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *