ಭಾರತ್ ಬಂದ್‍ಗೆ ರಾಯಚೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

Public TV
1 Min Read

ರಾಯಚೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿಗಳು, ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯಿಂದ ಸಾರಿಗೆ ನಿಯಮಗಳನ್ನು ಖಾಸಗಿಯವರಿಗೆ ವಹಿಸಿರುವ ನೀತಿಗಳ ವಿರುದ್ಧ ಹಾಗೂ ಕಾರ್ಮಿಕರ ಇನ್ನಿತರೆ ಬೇಡಿಕೆಗಳನ್ನು ಒತ್ತಾಯಿಸಿ ನಾಳೆ ನಡೆಯಲಿರುವ ಭಾರತ ಬಂದ್ ಹಿನ್ನೆಲೆ ರಾಯಚೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ 3 ಕೆಎಸ್‌ಆರ್‌ಪಿ, 10 ಡಿಎಆರ್, 500 ಪೊಲೀಸ್ ಕಾನ್‍ಸ್ಟೇಬಲ್‍ಗಳು, ಅತಿ ಸೂಕ್ಷ್ಮ ಸ್ಥಳಗಳಲ್ಲಿ ಕ್ಯಾಮೆರಾ ಮ್ಯಾನ್‍ಗಳನ್ನು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 40 ಪಿಎಸ್‍ಐಗಳು, 20 ಸಿಪಿಐಗಳು, 04 ಡಿವೈಎಪಿಗಳು, ಹಾಗೂ ಇಬ್ಬರು ಎಸ್‍ಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.

ಬಂದ್ ಸಮಯದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಕರಣ ನಡೆದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಸ್ತೆ ಮೇಲೆ ಟೈಯರ್‍ಗಳನ್ನು ಸುಟ್ಟು ಸಂಚಾರಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾದ್ಯಾಂತ ಚೆಕ್ ಪೋಸ್ಟ್‍ಗಳನ್ನು ನಿರ್ಮಿಸಿ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇಧಮೂರ್ತಿ ಹೇಳಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಲ್ಲಿನ ಸಿಐಟಿಯು, ಎಐಟಿಯುಸಿ, ಬಿಎಸ್‍ಎನ್‍ಎಲ್‍ಇಯು, ಎಐಯುಟಿಯುಸಿ ಸೇರಿ 10ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ಬೆಳಗ್ಗೆ 10 ಗಂಟೆಯಿಂದ 12ರವರೆಗೆ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶ ನಡೆಸಲಿವೆ. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.

ಬುಧವಾರ ಎಂದಿನಂತೆ ಬಸ್ ಸಂಚಾರ, ಶಾಲಾ ಕಾಲೇಜುಗಳು ನಡೆಯಲಿದ್ದು, ಸ್ವಯಂ ಪ್ರೇರಿತರಾಗಿ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟು ಬಂದ್ ಮಾಡುವ ಸಾಧ್ಯತಯಿದೆ. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಿರುವುದರಿಂದ ಖಾಸಗಿ ಶಾಲಾ ಕಾಲೇಜುಗಳು ರಜೆ ಘೋಷಿಸುವ ಸಾಧ್ಯತೆಯಿದೆ. ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *