ಬೆಂಗಳೂರು: ಹೆಂಡತಿ ಡೈವೋರ್ಸ್ ನೀಡದೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಪತ್ನಿ ಭುವನೇಶ್ವರಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಪತಿ ಬಾಲಮುರುಗನ್‌ನ ನಟೋರಿಯಸ್ ಮನಸ್ಥಿತಿ ಪೊಲೀಸರ ವಿಚಾರಣೆಯಲ್ಲಿ ಒಂದೊಂದೆ ಬೆಳಕಿಗೆ ಬರುತ್ತಿದೆ.
ಡಿ.24 ರಂದು ಮಾಗಡಿ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದಿದ್ದ ಭೀಕರ ಕೊಲೆಯ ಹಿಂದೆ ಪತಿಯ ಪೂರ್ವಯೋಜಿತ ಮತ್ತು ಕ್ರಿಮಿನಲ್ ಮೈಂಡ್ ಪೊಲೀಸರನ್ನೇ ಹುಬ್ಬೇರುವಂತೆ ಮಾಡಿದೆ. ಪತ್ನಿ ಭುವನೇಶ್ವರಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದ ಪತಿ ಬಾಲಮುರುಗನ್ ಮಾಡಬಾರದ ಕಸರತ್ತುಗಳನ್ನು ಮಾಡಿ, ವಿಫಲವಾದರೂ ಛಲ ಬಿಡದೆ ಕೊನೆಗೆ ತನ್ನ ಪತ್ನಿಯನ್ನೇ ಮುಗಿಸಿದ್ದಾನೆ. ಇದನ್ನೂ ಓದಿ: ಪತ್ನಿಗೆ ನಡುರಸ್ತೆಯಲ್ಲೇ ಗುಂಡಿಟ್ಟು ಕೊಂದ ಪತಿ; ಬಿಹಾರ ಮೂಲದ ವ್ಯಕ್ತಿಯಿಂದ 80 ಸಾವಿರಕ್ಕೆ ಗನ್ ಖರೀದಿಸಿದ್ದ ಆರೋಪಿ
ಕೊಲೆ ಮಾಡುವ ಉದ್ದೇಶದಿಂದಲೇ ಗನ್ ಖರೀದಿಸಲು ಮುಂದಾಗಿ ಮೂರು ಬಾರಿ ಬಿಹಾರಕ್ಕೆ ಪ್ರಯಾಣಿಸಿದ್ದ. ಮೊದಲ ಎರಡು ಬಾರಿ ಹಣ ಕಳೆದುಕೊಂಡು ಗನ್ ಸಿಗದೆ ಮೋಸ ಹೋಗಿ ವಾಪಸ್ಸಾಗಿದ್ದ. ಆದರೆ, ಮೂರನೇ ಬಾರಿ ಮತ್ತೆ ಬಿಹಾರಕ್ಕೆ ತೆರಳಿ, ಗನ್ ತೋರಿಸಿದ ಬಳಿಕವೇ ಹಣ ನೀಡಿ ಎರಡು ಪಿಸ್ತೂಲ್‌ಗಳನ್ನು ಖರೀದಿಸಿ ತಂದಿದ್ದ. ಅಷ್ಟೇ ಅಲ್ಲದೆ, ಬಿಹಾರದಲ್ಲೇ 15 ದಿನಗಳ ಕಾಲ ಪಿಸ್ತೂಲ್ ಬಳಸುವ ತರಬೇತಿಯನ್ನೂ ಪಡೆದಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬಯಲಾಗಿದೆ.
ಒಂದು ಗನ್ ಅನ್ನು ತಮಿಳುನಾಡಿನ ವ್ಯಕ್ತಿಯೊಬ್ಬನಿಗೆ ನೀಡಿ ಪತ್ನಿ ಕೊಲೆಗೆ ಸುಪಾರಿ ನೀಡಿದ್ದ. 1.25 ಲಕ್ಷ ರೂ. ಹಣ ಪಡೆದ ಸುಪಾರಿ ಕಿಲ್ಲರ್ ಬೆಂಗಳೂರಿನ ಲಾಡ್ಜ್‌ನಲ್ಲಿ ಉಳಿದುಕೊಂಡು, ಭುವನೇಶ್ವರಿಯನ್ನ ವಾಚ್ ಮಾಡಿ ಕೊನೆಗೆ ಕೊಲೆ ಮಾಡದೆ ವಾಪಸ್ಸಾಗಿದ್ದ. ಈ ವೇಳೆ ಬಾಲಮುರುಗನ್ ‘ನಾನು ಹಿಂದೆ ಇರ್ತೀನಿ ಬಾ’ ಎಂದು ಸುಪಾರಿ ಕಿಲ್ಲರ್‌ನ ಕರೆದೊಯ್ದರೂ ಗುಂಡು ಹಾರಿಸದೆ ವಾಪಸ್ಸಾಗಿದ್ದ. ಇದನ್ನೂ ಓದಿ: ಪವನ್ ನಿಜ್ಜೂರು ಅಮಾನತು – ಬ್ಯಾನರ್ ಗಲಾಟೆಯಾದಾಗ ಪಾರ್ಟಿ ಮೂಡ್‌ನಲ್ಲಿದ್ದ ಬಳ್ಳಾರಿ ಎಸ್‌ಪಿ!
ಸುಪಾರಿ ಕಿಲ್ಲರ್‌ನಿಂದ ಕೆಲಸ ಆಗದಿದ್ದಾಗ, ಬಾಲಮುರುಗನ್ ತಾನೇ ಅಖಾಡಕ್ಕೆ ಇಳಿದಿದ್ದ. ಸ್ವತಃ ಎರಡು ಬಾರಿ ಕೊಲೆಗೆ ಯತ್ನಿಸಿದ್ದರೂ, ಧೈರ್ಯ ಸಾಲದೆ ಹಿಂದಕ್ಕೆ ಸರಿದಿದ್ದ. ಆದರೆ, ತನ್ನ ಪತ್ನಿಯನ್ನು ಕೊಲ್ಲಲೇಬೇಕೆಂದು ಧೈರ್ಯ ಮಾಡಿ ಭುವನೇಶ್ವರಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ನೀಡಿದವರು ಹಾಗೂ ಸುಪಾರಿ ಪಡೆದವನ ಪತ್ತೆಗೆ ಮಾಗಡಿ ರಸ್ತೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

