1 ಕೋಟಿ ರೂ.ಗಾಗಿ ಸ್ನೇಹಿತರಿಂದಲ್ಲೇ ಖ್ಯಾತ ಖಳನಟನ ಬಾಮೈದನ ಅಪಹರಣ – ಸಿನಿಮಾ ಶೈಲಿಯಲ್ಲಿ ಆರೋಪಿಗಳ ಅರೆಸ್ಟ್

Public TV
1 Min Read

ಬೆಂಗಳೂರು: ಹಣಕ್ಕಾಗಿ ಖಳನಟ ದಿವಂಗತ ವಜ್ರಮುನಿ ಅವರ ಬಾಮೈದನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಅಪಹರಣಕಾರರನ್ನು ಪೊಲೀಸರು ಸಿನಿಮಾ ಶೈಲಿಯಲ್ಲಿ ಬಂಧಿಸಿದ್ದಾರೆ.

ವಜ್ರಮುನಿಯವರ ಬಾಮೈದ ಶಿವಕುಮಾರ್ ಬಾಷ್ ಕಂಪನಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದರು. ಇವರನ್ನು ಒಂದು ಕೋಟಿ ಹಣಕ್ಕಾಗಿ ಸ್ನೇಹಿತರೇ ಅಪಹರಣ ಮಾಡಿದ್ದರು. ಆದರೆ ಇಂದು ಪೊಲೀಸರ ಕಾರ್ಯಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಯ ವಿವರ?:
ಶಿವಕುಮಾರ್ ಸ್ನೇಹಿತ ಸತ್ಯ ಹೊಸ ಕಾರನ್ನು ತೆಗೆದುಕೊಂಡು ಸಾಲ ತೀರಿಸಲು ಆಗದೇ ಪರದಾಡುತ್ತಿದ್ದನು. ಈ ವೇಳೆ ಶಿವಕುಮಾರ್ ಗೆ ಸಾಲ ಕೊಡುವಂತೆ ಬೇಡಿಕೆ ಇಟ್ಟಿದ್ದನು. ಒಂದು ತಿಂಗಳ ಹಿಂದೆ ಶಿವಕುಮಾರ್ ತಮ್ಮ ಹಳೆ ಮನೆಯನ್ನು ಒಂದು ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸತ್ಯ ಸಾಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದನು. ಶಿವಕುಮಾರ್ ಯಾವಾಗ ಸಾಲವನ್ನು ಕೊಡುವುದಿಲ್ಲ ಎಂದು ತಿಳಿಯಿತೋ ಆಗ ಸತ್ಯ ತನ್ನ ಸ್ನೇಹಿತರ ಜೊತೆ ಸೇರಿ ಅಪಹರಣದ ಪ್ಲಾನ್ ಮಾಡಿದ್ದಾನೆ.

ಭಾನುವಾರ ಸತ್ಯ ಮತ್ತು ಆತನ ಸ್ನೇಹಿತರು ಸೇರಿ ಶಿವಕುಮಾರ್ ನನ್ನು ಅಪಹರಿಸಿದ್ದಾರೆ. ನಂತರ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆಪರೇಷನ್ ಶಿವ ಎಂಬ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಮಾಡಿದ್ದಾರೆ. ನಂತರ ಆರೋಪಿಗಳ ಬಗ್ಗೆ ತಿಳಿದು ಡಿಸಿಪಿ ಹಾಗೂ ಎಸಿಪಿ ಸೇರಿದಂತೆ ಸಿಬ್ಬಂದಿಗಳಾದ ಗಿರಿರಾಜ್, ಭೋಳತ್ತಿನ್, ಮಂಜುನಾಥ್, ಇನ್ಸ್ ಪೆಕ್ಟರ್ ಚೇತನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪೊಲೀಸರು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದ್ದಾರೆ. ಬಳಿಕ ಕೋಲಾರದ ಶ್ರೀನಿವಾಸಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಗೆಳೆಯ ಸತ್ಯ, ಯಶವಂತ, ವಿನೋದ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಬಂಧಿತ ಆರೋಪಿಗಳ ಬಳಿ ಇದ್ದ ಒಂದು ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *