ಲಕ್ಷ ಕೊಡಿ, ಮರಳು ಹೊಡಿ ಸ್ಕೀಂ-ಅಕ್ರಮ ಮರಳು ವ್ಯವಹಾರಕ್ಕೆ ಪೊಲೀಸರೇ ಪೋಷಕರು

Public TV
2 Min Read

-ಘಟನೆ ಬೆಳಕಿಗೆ ಬರ್ತಿದ್ದಂತೆ ಪೊಲೀಸ್ ಅಧಿಕಾರಿಗಳೇ ಮಿಸ್ಸಿಂಗ್

ಶಿವಮೊಗ್ಗ: ಇದು ಲಕ್ಷ ಕೊಡಿ, ಮರಳು ಹೊಡಿ ಸ್ಕೀಂ ಕಥೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಜಾರಿ ಮಾಡಿರುವ ಅಕ್ರಮ ಸ್ಕೀಂ ಇದಾಗಿದೆ. ಸ್ಕೀಂ ಜಾರಿ ಮಾಡಿದ ಪೊಲೀಸ್ ಅಧಿಕಾರಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ. ಸಾಮಾನ್ಯ ಪೊಲೀಸ್ ಪೇದೆಯಿಂದ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಮರಳು ಮಾಫಿಯಾವನ್ನು ಪೊಲೀಸರೇ ಅಪ್ಪ-ಅಮ್ಮ ಎರಡೂ ಆಗಿ ಸಾಕುತ್ತಿದ್ದಾರೆ. ಜಿಲ್ಲೆಯ ಪೊಲೀಸರಿಗೆ ಪ್ರತಿ ತಿಂಗಳು 1 ಲಕ್ಷ ರೂಪಾಯಿ ನೀಡಿದ್ರೆ ಬೇಕಾದಷ್ಟು ಮರಳನ್ನು ಬೇಕಾದ ಜಾಗದಿಂದ ಅಕ್ರಮವಾಗಿ ಎಲ್ಲಿಗೆ ಬೇಕಾದರೂ ಸಾಗಿಸಬಹುದು. ಈ ಅಕ್ರಮದ ಪಾಲುದಾರರಾದ ಶಿವಮೊಗ್ಗ ಡಿಎಸ್‍ಪಿ ಸುದರ್ಶನ್ ಹಾಗೂ ಎಸ್‍ಐ ಭಾರತಿ ಅವರು ಹಾಗೂ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಬಂಧನದ ಭೀತಿಯಲ್ಲಿ ರಜೆ ಹಾಕಿ ಹೋಗಿದ್ದಾರೆ. ಡಿಎಸ್‍ಪಿ ಹಾಗೂ ಎಸ್‍ಐ ಶಿವಮೊಗ್ಗ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆದರೆ, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಎಸಿಬಿ ವಿಚಾರಣೆ ಎದುರಿಸಲು ಸಿದ್ಧ ಎನ್ನುತ್ತಿದ್ದಾರೆ. ಇವರೆಲ್ಲರನ್ನೂ ಅವರಿದ್ದ ಹುದ್ದೆಯಿಂದ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಈ ಸ್ಕೀಂ ಬೆಳಕಿಗೆ ಬಂದದ್ದೇ ವಿಶೇಷವಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಸಿ ಬಿ.ಕೆ.ಯಲ್ಲಪ್ಪ ಎಂಬಾತ ಎಸಿಬಿಗೆ ಟ್ರ್ಯಾಪ್ ಆದ ಮೇಲೆ ಇಲಾಖೆಯ ಹಿರಿಯ ಅಧಿಕಾರಿಗಳ ಬಣ್ಣ ಬಯಲಾಗಿದೆ. ಎಸಿಬಿಗೆ ಚನ್ನಗಿರಿಯ ಫೈರೋಜ್ ನೀಡಿರುವ ದೂರಿನಲ್ಲಿ ಈ ಕುರಿತು ಸಮಗ್ರ ಮಾಹಿತಿ ನೀಡಿದ್ದಾನೆ. ಮರಳು ಸಾಗಿಸಲು ಅನುಮತಿಗಾಗಿ ಓಡಾಡುತ್ತಿದ್ದ ಫೈರೋಜ್ ಗೆ ಗ್ರಾಮಾಂತರ ಪೊಲೀಸರ ನೆರವು ಪಡೆದರೆ ದಂಧೆ ನಡೆಸುವುದು ಸುಲಭ ಎಂಬ ಮಾಹಿತಿ ದೊರಕುತ್ತದೆ.

ಈ ವೇಳೆ ಗ್ರಾಮಾಂತರ ಠಾಣೆ ಪೊಲೀಸ್ ಪೇದೆ ಯಲ್ಲಪ್ಪನನ್ನು ಸಂಪರ್ಕ ಮಾಡುತ್ತಾರೆ. ಯಲ್ಲಪ್ಪ ಡಿಎಸ್ಪಿ ಸುದರ್ಶನ್ ಹಾಗೂ ಇನ್ಸ್ ಪೆಕ್ಟರ್ ಭಾರತಿ ಅವರನ್ನು ಭೇಟಿ ಮಾಡಿಸುತ್ತಾನೆ. ಅಕ್ರಮ ಮರಳು ಸಾಗಾಣಿಕೆಗೆ ಮಾತುಕತೆ ನಡೆಸಿದ ಸ್ವತಃ ಡಿಎಸ್ ಪಿ ಸುದರ್ಶನ್ ಅವರು, ಎಷ್ಟು ಲಾರಿಗಳಿವೆ? ಲಾರಿ ನಂಬರ್ ಬರೆಸು ಎಂದು ಹೇಳುತ್ತಾರೆ. ನಂತರ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಕೊಡಲು ಸೂಚನೆ ನೀಡುತ್ತಾರೆ. ಈ ಒಂದು ಲಕ್ಷ ರೂಪಾಯಿಯನ್ನು ಹದಿನೈದು ದಿನಕ್ಕೊಮ್ಮೆ 50 ಸಾವಿರದಂತೆ ನೀಡಲು ಪುಸ್ತಕದಲ್ಲಿ ಲೆಕ್ಕ ಬರೆಯುತ್ತಾರೆ. ಈ 50 ಸಾವಿರದಲ್ಲಿ 32 ಸಾವಿರ ರೂಪಾಯಿ ಮೊದಲು ನೀಡಿದ್ದು, ಉಳಿದ 17 ಸಾವಿರ ನೀಡಲು ಒತ್ತಾಯ ಮಾಡಿದಾಗ ಫೈರೋಜ್ ಎಸಿಬಿಗೆ ದೂರು ನೀಡಿದ್ದಾನೆ. ಈ 17 ಸಾವಿರ ರೂಪಾಯಿ ಪಡೆಯುವಾಗ ಯಲ್ಲಪ್ಪ ಎಸಿಬಿ ಬಲೆಗೆ ಸಿಲುಕಿ, ಈಗ ಇಲಾಖೆ ಹಿರಿಯ ಅಧಿಕಾರಿಗಳ ಮುಖವಾಡ ಬಯಲು ಮಾಡಿದ್ದಾನೆ.

 

ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ನಾಪತ್ತೆ ಆಗಿದ್ದ ಡಿಎಸ್ ಪಿ ಸುದರ್ಶನ್ ಹಾಗೂ ಎಸ್ ಐ ಭಾರತಿ ಅವರಿಗೆ ಜಾಮೀನು ದೊರಕಿದೆ. ಆದರೆ, ಎಸಿಬಿ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಮಾತ್ರ ಮರಳು ದಂಧೆಯ ಕರಾಳ ಸ್ವರೂಪ ಹಾಗೂ ಅದರ ಹಿಂದೆ ಇರುವ ಹಿರಿಯ ಅಧಿಕಾರಿಗಳ ವಿವರ ಬಯಲಿಗೆ ಬರಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *