ಪೊಲೀಸರ ಕಾರ್ಯಾಚರಣೆ – ಬರೋಬ್ಬರಿ 4.62 ಕೋಟಿ ಮೌಲ್ಯದ ಸೊತ್ತುಗಳ ಹಸ್ತಾಂತರ

Public TV
1 Min Read

ಮಂಗಳೂರು: ಕಳವಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ. ಆದರೆ ಆ ಸೊತ್ತುಗಳನ್ನು ಮರಳಿ ವಾರಸುದಾರರಿಗೆ ಹಿಂತಿರುಗಿಸುವುದು ಕೋರ್ಟ್ ಕೇಸಿನಿಂದಾಗಿ ವಿಳಂಬವಾಗುತ್ತೆ. ಆದರೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ನ್ಯಾಯಾಲಯದ ಅನುಮತಿ ಪಡೆದು ಸಾಮೂಹಿಕವಾಗಿ ವಸ್ತುಗಳ ಹಸ್ತಾಂತರ ಪ್ರಕ್ರಿಯೆ ನಡೆಸಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 2018 ಮತ್ತು 19ರ ಸಾಲಿನಲ್ಲಿ ನಡೆದ ಕಳವು ಪ್ರಕರಣಗಳ ಪೈಕಿ ವಶಕ್ಕೆ ಪಡೆದ ಸೊತ್ತುಗಳನ್ನು ಮರಳಿಸುವ ಕಾರ್ಯಕ್ರಮ ನಡೆದಿದೆ. 2018ರಲ್ಲಿ 4.30 ಕೋಟಿ ಹಾಗೂ 2019ರಲ್ಲಿ ಈವರೆಗೆ 32 ಲಕ್ಷ ರೂಪಾಯಿ ಮೌಲ್ಯದ ಒಂದೂವರೆ ಕೆಜಿ ಚಿನ್ನಾಭರಣ ಮತ್ತು 25 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಅದನ್ನು ಯಥಾಸ್ಥಿತಿಯಲ್ಲಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಕುಖ್ಯಾತ ಕಳ್ಳ ಅಬ್ದುಲ್ ಖಾದರ್ ಮಂಗಳೂರಿನ ಸುರತ್ಕಲ್‍ನಲ್ಲಿ ಕಳೆದ ಡಿಸೆಂಬರ್ 23ರಂದು ನಡೆಸಿದ್ದಾನೆ. ಹುಳಿ ಮಾರುವ ನೆಪದಲ್ಲಿ ಸುರತ್ಕಲ್‍ನ ಮನೆಗೆ ಬಂದಿದ್ದ ಅಬ್ದುಲ್ ಖಾದರ್, ಅಂದಿನ ರಾತ್ರಿ ಸುಮಾರು 3 ಗಂಟೆಗೆ ಇನ್ನೋರ್ವನ ಜೊತೆ ಮನೆಗೆ ನುಗ್ಗಿದ್ದು, ಮನೆಯ ಕಿಟಕಿ ಮೂಲಕ ಬಾಗಿಲ ಒಳಭಾಗದಲ್ಲಿದ್ದ ಕೀಯನ್ನು ತೆಗೆದು ಮನೆಮಂದಿ ರಾತ್ರಿ ಮಲಗಿದ್ದಾಗಲೇ 208 ಗ್ರಾಂ ಚಿನ್ನಾಭರಣ ಮತ್ತು 25 ಸಾವಿರ ರೂ. ನಗದನ್ನು ದೋಚಿದ್ದ. ಸಿಸಿಟಿವಿ ಆಧರಿಸಿ ಸುರತ್ಕಲ್ ಪೊಲೀಸರು ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿ, 121 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಇದೇ ರೀತಿ ಮಂಗಳೂರಿನ ದೇರೆಬೈಲ್ ನಿವಾಸಿ ಸೆಲಿನಾ ಕೊರಿಯಾ ಮನೆಯಿಂದ ಕೆಲಸದಾಕೆಯೇ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಳು. ವಿದೇಶದಲ್ಲಿರುವ ಪುತ್ರಿಗೆ ಸೇರಿದ ಚಿನ್ನಾಭರಣ ಕಳವಾಗಿದ್ದು ಒಂದೂವರೆ ತಿಂಗಳ ಬಳಿಕ ಗೊತ್ತಾಗಿದೆ. ಪೊಲೀಸರು ಮನೆಯವರ ಸಂಶಯದಂತೆ ಕೆಲಸದಾಕೆ ಮರಿಯಾ ಪಿರೇರಾಳನ್ನು ವಿಚಾರಿಸಿದಾಗ ಕಳವು ವಿಚಾರ ಬಯಲಿಗೆ ಬಂದಿತ್ತು. ಇದೀಗ ಒಂದಷ್ಟು ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದು ವಾರಸುದಾರರಿಗೆ ಮರಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *