ಚಿಕ್ಕಮಗಳೂರು| ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

Public TV
1 Min Read

– ಜೀಪ್ ಚಾಲಕ ಅಮಾನತು

ಚಿಕ್ಕಮಗಳೂರು: ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ (Police Jeep) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು  (Kadur) ತಾಲೂಕಿನ ಮಚ್ಚೇರಿ ಸಮೀಪದ ಶ್ರೀರಂಗ ಕಾಂಕ್ರೀಟ್ ಪ್ರಾಡಕ್ಟ್ ಬಳಿ ನಡೆದಿದೆ.

ಮೃತನನ್ನು ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿ ಸಮೀಪದ ಪಟ್ಟೇದೇವರಹಳ್ಳಿಯ 47 ವರ್ಷದ ಗಂಗೋಜಿ ರಾವ್ ಎಂದು ತಿಳಿದು ಬಂದಿದೆ. ಮೃತ ಗಂಗೋಜಿರಾವ್ ಕಡೂರಿನಿಂದ ಪಟ್ಟೇದೇವರಹಳ್ಳಿಗೆ ಹೋಗುತ್ತಿದ್ದರು. ಸಿಂಗಟಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೀಪ್ ಕೂಡ ಕಡೂರಿನಿಂದ ಸಿಂಗಟಗೆರೆ ಪೋಲಿಸ್ ಸ್ಟೇಷನ್‌ಗೆ ಹೋಗುತ್ತಿತ್ತು. ಈ ವೇಳೆ ಮಚ್ಚೇರಿಯ ಶ್ರೀರಂಗ ಕಾಂಕ್ರೀಟ್ ಪ್ರಾಡಕ್ಟ್ ಬಳಿ ಗಂಗೋಜಿರಾವ್ ತನ್ನ ಬೈಕ್ ನಿಲ್ಲಿಸಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕಡೂರು ಕಡೆಯಿಂದ ಬಂದ ಸಿಂಗಟಗೆರೆ ಠಾಣೆಯ ಪೊಲೀಸ್ ಜೀಪ್ ಸ್ಕೂಟಿಗೆ ಡಿಕ್ಕಿಯಾಗಿ ಗಂಗೋಜಿರಾವ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ದೇವೇಗೌಡರ ಒತ್ತಾಯ

ಇತ್ತ ಪೊಲೀಸ್ ಜೀಪ್ ಚಾಲಕ ಜೀಪ್ ನಿಲ್ಲಿಸದೇ ಹೊರಟು ಹೋಗಿದ್ದಾನೆ. ಮೃತನ ಪತ್ನಿ ಸಂಬಂಧಿಕರು ಪೊಲೀಸ್ ಚಾಲಕನ ವರ್ತನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಚಾಲಕನನ್ನು ಬಂಧಿಸುವ ತನಕ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಮೃತರ ಕುಟುಂಬಸ್ಥರನ್ನ ಸಮಾಧಾನ ಮಾಡಿ ಶವವನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಅಂತಾರಾಜ್ಯ ಜಲ ವಿವಾದ ಬಗೆಹರಿಸಲು ನ್ಯಾಯ ಮಂಡಳಿ ಸ್ಥಾಪನೆಗೆ ಸಂಸದ ಬಸವರಾಜ ಬೊಮ್ಮಾಯಿ ಸಲಹೆ

ಅಫಘಾತಕ್ಕೆ ಕಾರಣವಾದ ಪೊಲೀಸ್ ಜೀಪನ್ನು ಕಡೂರು ಪೊಲೀಸರು ಸೀಜ್ ಮಾಡಿದ್ದು, ಜೀಪ್ ಚಾಲಕ ಶಿವಕುಮಾರ್‌ನನ್ನು ಎಸ್ಪಿ ವಿಕ್ರಂ ಅಮ್ಟೆ ಅಮಾನತು ಮಾಡಿ ಆದೇಶಿಸಿದ್ದಾರೆ. ಜೀಪ್ ಚಾಲಕ ಶಿವಕುಮಾರ್‌ನನ್ನ ಕಡೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಡುಪಿ| ಮೀನು ಕದ್ದಳೆಂದು ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ; ನಾಲ್ವರ ಬಂಧನ

Share This Article