– ಬೇರೆ ಬೇರೆ ಸ್ಥಳಗಳಿಗೆ ಕರ್ಕೊಂಡು ಹೋಗಿ ಅತ್ಯಾಚಾರ
ಮುಂಬೈ: 16 ವರ್ಷದ ಬಾಲಕಿಯನ್ನು ಆರು ತಿಂಗಳಿನಿಂದ 10 ಮಂದಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಸ್ಥಳೀಯರು ನಗರದ ದೇವಾಲಯದ ಹೊರಗೆ ಅಳುತ್ತಿದ್ದ ಸಂತ್ರಸ್ತೆಯನ್ನು ನೋಡಿ ನಮಗೆ ಮಾಹಿತಿ ತಿಳಿಸಿದ್ದರು. ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಸಂತ್ರಸ್ತೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ನಡೆದ ಘಟನೆಯ ಬಗ್ಗೆ ಸಂತ್ರಸ್ತೆ ವಿವರಿಸಿದ್ದಾಳೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ, 10 ಆರೋಪಿಗಳಲ್ಲಿ ಐವರನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ಮತ್ತು ಕೆಲವು ಆರೋಪಿಗಳು ಸ್ನೇಹಿತರಾಗಿದ್ದರು. ನಂತರ ಈ ಕೃತ್ಯದಲ್ಲಿ ಇತರರು ಸೇರಿಕೊಂಡಿದ್ದಾರೆ. ಅವರಲ್ಲಿ ಕೆಲವರು ಆಟೋರಿಕ್ಷಾ ಚಾಲಕರೂ ಇದ್ದರು. 10 ಮಂದಿ ಆರೋಪಿಗಳು ಆರು ತಿಂಗಳಲ್ಲಿ ಸಂತ್ರಸ್ತೆಯನ್ನು ಬಲವಂತವಾಗಿ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸೋಲಾಪುರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ವಿಜಾಪುರ ನಾಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇತರ ಆರೋಪಿಗಳ ಹುಡುಕಾಟ ನಡೆಯುತ್ತಿದೆ. ಸಂತ್ರಸ್ತೆಯ ತಂದೆ ಇತ್ತೀಚೆಗೆ ನಿಧನರಾಗಿದ್ದು, ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಇವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.