ಬೆಳಗಾವಿ: ಪ್ರೀತಿಸಿ ಮದುವೆಯಾಗಿ ವಿಚ್ಛೇದನ ಪಡೆದ ಬಳಿಕ ಮಾಜಿ ಪತ್ನಿಯನ್ನ ಪೊಲೀಸಪ್ಪ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪತ್ನಿಗೆ ಚಟ್ಟಕಟ್ಟಿ ಮನೆಯ ಹೊರಗಿನಿಂದ ಬೀಗ ಹಾಕಿಕೊಂಡು ಪೊಲೀಸಪ್ಪ ಕಾಣೆಯಾಗಿದ್ದ ಎನ್ನಲಾಗಿದೆ. ಮೃತದೇಹ ಕೊಳೆತು ವಾಸನೆ ಬಂದಾಗ ಸ್ಥಳೀಯರಿಂದ ಪ್ರಕರಣ ಬೆಳಕಿಗೆ ಬಂದಿದೆ. ಮನೆಗೆ ನುಗ್ಗಿ ಭೀಕರವಾಗಿ ಹತ್ಯೆಗೈದು ಬಳಿಕ ಡೋರ್ ಲಾಕ್ ಮಾಡಿಕೊಂಡು ಹಂತಕ ಪರಾರಿಯಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು - ಎನ್‌ಕೌಂಟರ್‌ಗೆ ರೌಡಿಶೀಟರ್ ಬಲಿ
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಈ ದಾರುಣ ಘಟನೆ ನಡೆದಿದೆ. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶಮ್ಮ ನೆಲ್ಲಿಗಣಿ (34) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಕಾಗವಾಡ ತಾಲೂಕಿನ ಬನಜವಾಡ ಗ್ರಾಮ ಸಂತೋಷ ಕಾಂಬಳೆ ಕೊಲೆ ಆರೋಪಿ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಕ್ಷ ನಿಷ್ಠೆಗೆ ಫಲ ಸಿಗಲಿದೆ ತಾಳ್ಮೆಯಿಂದಿರಿ – ಡಿಕೆಶಿಗೆ ಖರ್ಗೆ ಅಭಯ, 1 ಗಂಟೆಗೂ ಹೆಚ್ಚುಕಾಲ ಮಾತುಕತೆ
ಸವದತ್ತಿ ಕೆಎಸ್‌ಆರ್‌ಟಿಸಿ ಡಿಪೋ ವ್ಯಾಪ್ತಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ ಕಾಶಮ್ಮ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಸಂತೋಷ ಪಾಟೀಲ್ ಇಬ್ಬರೂ ಸೇರಿ ಕಳೆದ 13 ವರ್ಷಗಳ ಹಿಂದೆಯೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರೂ ಸಹ ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಮದುವೆ ಜೋಡಿ ಸಪ್ತಪದಿ ತುಳಿದಿತ್ತು. ಮದುವೆಯಾಗಿ ಕೆಲವೇ ದಿನಗಳಲ್ಲಿ ಕಾಶಮ್ಮಳಿಗೆ ಪತಿ ಸಂತೋಷ ನಿರಂತರ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದ್ದು ಗಂಡನ ಕಿರುಕುಳ ಹೆಚ್ಚಾದಂತೆ ಸವದತ್ತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಾಶಮ್ಮ ವಾಸವಾಗಿದ್ದಳು ಎನ್ನಲಾಗಿದೆ.
ಬಳಿಕ ಸಂತೋಷನ ಕಾಟ ತಾಳಲಾರದೇ ವಿವಾಹ ವಿಚ್ಛೇದನ ಪಡೆದಿದ್ದಳು. ಕಳೆದ ಐದು ತಿಂಗಳ ಹಿಂದಷ್ಟೇ ಬೈಲಹೊಂಗಲ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನವಾಗಿತ್ತು. ಆದರೇ, ಅಕ್ಟೋಬರ್ 13ರಂದು ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಕಾಶಮ್ಮಳ ಮನೆಗೆ ಅದೇ ದಿನ ರಾತ್ರಿ 8ಗಂಟೆ ಸುಮಾರಿಗೆ ಸಂತೋಷ ಬಂದಿದ್ದಾನೆ. ಈ ವೇಳೆ ಹರಿತವಾದ ಆಯುಧ ಬಳಸಿ ಕಾಶಮ್ಮಳ ಕತ್ತು, ಹೊಟ್ಟೆಗೆ ಚುಚ್ಚಿ ಆರೋಪಿ ಪರಾರಿಯಾಗಿದ್ದ. ಮೃತದೇಹದ ವಾಸನೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಪರಿಶೀಲನೆ ವೇಳೆ ಕೊಳೆತ ಸ್ಥಿತಿಯಲ್ಲಿ ಲೇಡಿ ಕಂಡಕ್ಟರ್ ಶವ ಪತ್ತೆಯಾಗಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಕೊಲೆ ಆರೋಪಿ ಸಂತೋಷನನ್ನು ಪೊಲೀಸರು ಬಂಧಿಸಿದ್ದು ಈ ಕುರಿತು ಸವದತ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಳೆಗಾಲದ ಮಧ್ಯೆ ನೀರಿಗೆ ಹಾಹಾಕಾರ – ಬೀದರ್‌ನ ಕುಗ್ರಾಮದ ಜನರಿಗೆ ಕೆಮಿಕಲ್ ನೀರು ಕುಡಿಯುವ ಕರ್ಮ