ಬೆಂಗಳೂರು: ನಗರದಲ್ಲಿ ನಟೋರಿಯಸ್ ರೌಡಿಗೆ ಪೊಲೀಸರು ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ. ನಟೋರಿಯಸ್ ರೌಡಿ ರಾಜದೊರೆ ಕಾಲಿಗೆ ಗುಂಡೇಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿಶೀಟರ್ ಪಳನಿಯ ಸಹಚರನಾಗಿದ್ದ ರಾಜದೊರೆ 18 ಪ್ರಕರಣಗಳಲ್ಲಿ ಆರೋಪಿ. ಬೆಂಗಳೂರಲ್ಲಿ ಕುಕೃತ್ಯ ನಡೆಸಿ ತಮಿಳುನಾಡಿಗೆ ಓಡಿ ಹೋಗುತ್ತಿದ್ದ. ಶುಕ್ರವಾರ ಅರೆಸ್ಟ್ ಮಾಡಲು ಹೋದಾಗ ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಲು ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಸಿಸಿಬಿ ಎಸಿಪಿ ಮಹದೇವಪ್ಪ ಟೀಂ ಸೋಲದೇವನಹಳ್ಳಿ ಬಳಿ ಆತನ ಕಾಲಿಗೆ ಎರಡು ಸುತ್ತು ಗುಂಡುಹಾರಿಸಿ ಬಂಧಿಸಿದ್ದಾರೆ. ಘಟನೆಯಲ್ಲಿ ಸಿಸಿಬಿ ಪೊಲೀಸ್ ಪೇದೆ ನರಸಿಂಹಮೂರ್ತಿ ಅವರಿಗೆ ಗಂಭೀರ ಗಾಯವಾಗಿದ್ದು, ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇತ್ತೀಚೆಗಷ್ಟೇ ಹಲಸೂರು ಕೆರೆಯ ಗುರುದ್ವಾರದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ರೌಡಿಶೀಟರ್ ಕಾರ್ತಿಕ್ ನನ್ನು ಪೊಲೀಸ್ ಪೇದೆ ಬಸವರಾಜ್ ಬನ್ಕರ್ ತಡೆದಿದ್ದರು. ಈ ವೇಳೆ ರೌಡಿಶೀಟರ್ ಪೊಲೀಸರಿಗೆ ಡ್ರಾಗರ್ ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಜೊತೆಗಿದ್ದ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಆತನ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದರು.
ಗಾಯಾಳು ರೌಡಿಶೀಟರ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಬಂಧಿಸಲಾಗಿತ್ತು. ರೌಡಿಶೀಟರ್ ಕಾರ್ತಿಕ್ ರೇಪ್ ಕೇಸ್‍ನಲ್ಲಿ ಏಳು ವರ್ಷ ಶಿಕ್ಷೆ ಅನುಭವಿಸಿದ್ದ. ಅಲ್ಲದೇ ಈತನ ವಿರುದ್ಧ ಕಲಾಸಿಪಾಳ್ಯದಲ್ಲಿ ನಾಲ್ಕು ಪ್ರಕರಣಗಳಿತ್ತು.